ಶ್ರೀಮಠದ ಅಂತರಂಗದ ಶಿಷ್ಯರಾದ, ಕರ್ನಾಟಕದ ಹೆಮ್ಮೆಯ ಘನತೆವೆತ್ತ ದಕ್ಷ ಮುಖ್ಯಮಂತ್ರಿಗಳಾದ ಶ್ರೀಯುತ ಸಿದ್ದರಾಮಯ್ಯನವರಿಗೆ,
ತಮ್ಮ ದಕ್ಷ ಆಡಳಿತದಲ್ಲಿ ನಮ್ಮ ಕರ್ನಾಟಕದ ಆರ್ಥಿಕತೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತಿರುವ ನಿಮ್ಮ ಕಾರ್ಯ ನಮಗೆ ಸಂತೋಷದಾಯಕವಾಗಿದೆ. ಆದರೆ, ಒಂದು ವಾರದ ಹಿಂದೆ ಕೆಲವೊಂದು ಮಾಧ್ಯಮಗಳಲ್ಲಿ ಮತ್ತು ಪತ್ರಿಕೆಯಲ್ಲಿ ಗಮನಿಸಿದ ಅಂಶವೇನೆಂದರೆ, ಬೆಳಗಾವಿಯಲ್ಲಿ 50 ಅಡಿ ಎತ್ತರದ ನಿಮ್ಮ ಕಂಚಿನ ಪ್ರತಿಮೆಯನ್ನು ನಿಮ್ಮ ಅಭಿಮಾನಿಗಳೆಲ್ಲರೂ ಸೇರಿದ ನಿರ್ಮಿಸುತ್ತಿದ್ದಾರೆ ಎಂಬ ವಿಷಯ ತಿಳಿದ ನಂತರ ಕಾಲಜ್ಞಾನದ ಪ್ರಕಾರ ಇದು ನಿಮ್ಮ ಅಭಿವೃದ್ಧಿಗೆ ಮಾರಕವಾಗಿದೆ ಮತ್ತು ಶಾಸ್ತ್ರದ ಪ್ರಕಾರ ಇದು ನಿಮ್ಮ ಬೆಳವಣಿಗೆಯನ್ನು ಕುಂಠಿತ ಮಾಡುತ್ತದೆ.
ನಮ್ಮ ಜಾತಕದಲ್ಲಿ ಏನಾದರೂ ತೊಂದರೆ ಇದ್ದಲ್ಲಿ ಆಯಾ ಗ್ರಹಕ್ಕೆ ತಕ್ಕ ಹಾಗೆ ವಿಗ್ರಹಗಳನ್ನು ನಿರ್ಮಿಸಿ ಪೂಜಿಸುವುದುಂಟು ಪೂಜೆಯಾದ ನಂತರ ವಿಸರ್ಜನೆಯನ್ನು ಮಾಡುತ್ತೀವಿ. ಉದಾಹರಣೆಗೆ ಮಹಾಭಾರತದಲ್ಲಿ ಭೀಮನಿಗೆ ಕಂಟಕ ಉಂಟಾಗುವುದು ಎಂದು ಅರಿತ ಶ್ರೀಕೃಷ್ಣ ಭೀಮನ ಪ್ರತಿಮೆಯನ್ನು ಮಾಡಿಸಿ ಭೀಮನಿಗೆ ಬರುವ ಗಂಡಾಂತರವನ್ನು ಪಾರುಮಾಡಿದರು.
ಹೀಗೆ ಸನಾತನ ಪರಂಪರೆಯಲ್ಲಿ ವೈಜ್ಞಾನಿಕ ರೀತಿಯಲ್ಲಿ ಮೂರ್ತಿಗಳ ಮಹತ್ವವನ್ನು ತಿಳಿಸಲಾಗಿದೆ. ಬದುಕಿರುವವರ ವ್ಯಕ್ತಿಯ ಮೂರ್ತಿಗಳನ್ನು ಮಾಡಬಾರದೆಂದು ಶಾಸ್ತ್ರಗಳಲ್ಲಿ ತಿಳಿಸಲಾಗಿದೆ.
ಹಾಗೆಯೇ ನೀವು ವೈಜ್ಞಾನಿಕವಾಗಿ ಗಮನಿಸಿ, ನಾವು ಈಗಾಗಲೇ ವೈಜ್ಞಾನಿಕವಾಗಿ ಗಮನಿಸಿದ್ದೇವೆ, ಉದಾಹರಣೆಗೆ ಎಷ್ಟೋ ಚಲನಚಿತ್ರ ನಟ-ನಟಿಯರ ಮೂರ್ತಿಗಳನ್ನು ಮಾಡಿ ಪೂಜೆಯನ್ನು ಮಾಡಿರುತ್ತಾರೆ. ಅಂತಹವರ ಜೀವನದಲ್ಲಿ ಎಷ್ಟು ಕಹಿ ಘಟನೆಗಳು ನಡೆದಿವೆ ಎಂಬುದು ಸಾಕ್ಷಿಯಾಗಿದೆ.
ಇನ್ನೊಂದು ಉದಾಹರಣೆ : ನಾವು ಗಮನಿಸಿದಾಗ ಹಾಗೇ ಸನ್ಮಾನ್ಯ ಪ್ರಧಾನಮಂತ್ರಿಗಳ ಮೂರ್ತಿಯನ್ನು ಉತ್ತರ ಭಾರತದಲ್ಲಿ ಮಾಡಿದಾಗ ಅವರ ವರ್ಚಸ್ಸಿಗೆ ಘಾಸಿಯುಂಟಾಯಿತು. ಹೀಗೆ ಹಲವಾರು ಉದಾಹರಣೆಗಳು ಸಿಗುತ್ತವೆ. ಆದ್ದರಿಂದ ಕರ್ನಾಟಕದಲ್ಲಿ ನಿಮ್ಮ ಕೊಡುಗೆ ಅಪಾರದವಾದದ್ದು, ತಾವುಗಳು ಬುದ್ಧ, ಬಸವಣ್ಣ, ಅಂಬೇಡ್ಕರ್ ರವರ ಆದರ್ಶಗಳನ್ನು ಪಾಲಿಸುತ್ತಾ, ಸರ್ವ ಜನಾಂಗದ ಶಾಂತಿಯ ತೋಟ ಎಂಬ ಕುವೆಂಪುರವರ ಮಾತಿನಂತೆ ಮುಂದುವರೆಯುತ್ತಿರುವುದು ಸಂತಸ ತಂದಿದೆ.
ಶ್ರೀ ಸಿದ್ದಲಿಂಗ ಶಿವಚಾರ್ಯ ಸ್ವಾಮೀಜಿಗಳು (ಕಾಲಜ್ಞಾನಿ ಮಠ, ಹರಿಹರ ದಾವಣಗೆರೆ)