ಮಂಡ್ಯ: ಸಕ್ಕರೆ ನಾಡಿನಲ್ಲಿ ನಡೆಯುತ್ತಿರುವ ಕನ್ನಡ ಜಾತ್ರೆ ಜನ ಜಾತ್ರೆಯಾಗಿ ಮಾರ್ಪಟ್ಟಿದೆ. ಮೊದಲ ದಿನ ದಾಖಲೆ ಪ್ರಮಾಣದ ಸಾಹಿತ್ಯಾಭಿಮಾನಿಗಳು ಪಾಲ್ಗೊಂಡಿದ್ರೆ, ಎರಡನೇ ದಿನವೂ ಸಾಗರೋಪಾಯದಲ್ಲಿ ಕನ್ನಡಿಗರು ಹರಿದು ಬಂದಿದ್ದುನ. ಒಂದೆಡೆ, ವಿಚಾರಗೋಷ್ಠಿ, ಕವಿಗೋಷ್ಠಿಗಳಾದ್ರೆ ಮತ್ತೊಂದೆಡೆ, ಪುಸ್ತಕ ಹಾಗೂ ವಾಣಿಜ್ಯ ಮಳಿಗೆಗಳು ಜನರನ್ನ ಆಕರ್ಷಿಸುತ್ತಿವೆ.
ಜೀವನದಿ ಕಾವೇರಿಯಿಂದ ಅಚ್ಚ ಹಸಿರಿನಿಂದ ಸಮೃದ್ದಿಯಾಗಿರೊ, ಅತಿ ಹೆಚ್ಚು ಕನ್ನಡ ಮಾತನಾಡುವ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರೊ ಮಂಡ್ಯದಲ್ಲಿ ನಿನ್ನೆಯಿಂದ ನುಡಿ ಜಾತ್ರೆ ಆರಂಭವಾಗಿದೆ. 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ದಿನವಾದ ನಿನ್ನೆ ಬರೋಬ್ಬರಿ 2 ಲಕ್ಷ ಜನರು ಸೇರುವ ಮೂಲಕ ದಾಖಲೆ ನಿರ್ಮಿಸಿದ್ರು. ಸಮ್ಮೇಳನದ ಎರಡನೇ ದಿನವಾದ ಇಂದು ಕೂಡ ಸಾಹಿತಿಗಳು, ಸಾಹಿತ್ಯಾಸಕ್ತರು, ಕನ್ನಡಾಭಿಮಾನಿಗಳು ಸಾಗರೋಪಾದಿಯಲ್ಲಿ ಹರಿದು ಬಂದಿದ್ದಾರೆ.
ಇದನ್ನೂ ಓದಿ: ಅರವಿಂದ್ ಕೇಜ್ರೀವಾಲ್ರನ್ನು ವಿಚಾರಣೆ ನಡೆಸಲು ಅನುಮತಿ ಕೋರಿದ ED !
ಸಮ್ಮೇಳನ ದ ಅಂಗವಾಗಿ 450 ಪುಸ್ತಕ ಮಳಿಗೆಗಳನ್ನ ತೆರೆಯಲಾಗಿದೆ. ನಾಡಿನ ವಿವಿಧ ಭಾಗಗಳಿಂದ ಆಗಮಿಸಿರುವ ಸಾಹಿತಿಗಳು, ಸಾಹಿತ್ಯಾಸಕ್ತರು, ಪುಸ್ತಕ ಮಳಿಗೆಗಳಿಗೆ ಭೇಟಿ ನೀಡಿ ತಮಗಿಷ್ಟವಾದ ಪುಸ್ತಕಗಳ ಖರೀದಿಯಲ್ಲಿ ಬಿಸಿಯಾಗಿದ್ರು. ಇನ್ನು ಪುಸ್ತಕ ಮಳಿಗೆಗಳ ಮಾಲೀಕರು ಕೂಡ ಉತ್ತಮ ವ್ಯಾಪಾರದಿಂದಾಗಿ ಖುಷಿಯಾಗಿದ್ದಾರೆ. ಮತ್ತೊಂದೆಡೆ, ಕೃಷಿ ಪ್ರಧಾನವಾದ ಮಂಡ್ಯ ಜಿಲ್ಲೆಯಲ್ಲಿ ಸಮ್ಮೇಳನ ನಡೆಯುತ್ತಿರುವ ಅಂಗವಾಗಿ ಆಯೋಜಿಸಿರುವ ಕೃಷಿ ಸಂಬಂಧಿತ ವಸ್ತು ಪ್ರದರ್ಶನ ಎಲ್ಲರ ಕೇಂದ್ರ ಬಿಂದುವಾಗಿದೆ. ಕೃಷಿ ಇಲಾಖೆ ವತಿಯಿಂದ ನೂತನ ಕೃಷಿ ಯಂತ್ರೋಪಕರಣ, ಹೊಸ ಹೊಸ ತಳಿಗಳ ಪ್ರದರ್ಶನ ಮತ್ತು ಮಾಹಿತಿ ರೈತಾಪಿ ವರ್ಗವನ್ನು ಉತ್ತೇಜಿಸುತ್ತಿದೆ.
ಸಾಮಾನ್ಯವಾಗಿ ಸಮ್ಮೇಳನಕ್ಕೆ ಬರುವ ಜನರು ಗೋಷ್ಠಿಗಳಿಂದ ದೂರ ಉಳಿಯೋದು ಸಹಜವಾಗಿತ್ತು. ಆದ್ರೆ, ಮಂಡ್ಯದ ಜನ ಗೋಷ್ಠಿಯಲ್ಲಿ ಕುಳಿತು ವಿಚಾರ, ವಿಷಯಗಳನ್ನ ಆಲಿಸುವ ಮೂಲಕ ನಾವು ಡಿಫರೆಂಟ್ ಅನ್ನೋದನ್ನ ಸಾಭೀತು ಪಡಿಸಿದ್ರು. ಇನ್ನು ಮಂಡ್ಯ ಅಂದ್ರೆ ಆತಿಥ್ಯಕ್ಕೆ ಹೆಸರು ವಾಸಿ. ಅದಕ್ಕೆ ಕೊಂಚವೂ ಚ್ಯುತಿಬಾರದ ನಿಟ್ಟಿನಲ್ಲಿ ಸರ್ಕಾರ ಮತ್ತು ಜಿಲ್ಲಾಡಳಿತ ಸಮ್ಮೇಳನಕ್ಕೆ ಬರುವ ಪ್ರತಿಯೊಬ್ಬರಿಗೂ ಉತ್ತಮ ಊಟೋಪಚಾರದ ವ್ಯವಸ್ಥೆ ಮಾಡಿದ್ದಾರೆ. ಇನ್ನು ಸಮ್ಮೇಳನಕ್ಕೆ ಬಂದ ಜನ ಕೂಡ ಮಂಡ್ಯದ ಆತಿಥ್ಯಕ್ಕೆ ಮನಸೋತರು.
ಸಾಹಿತ್ಯ ಸಮ್ಮೇಳನದಲ್ಲೂ ಬೆಳಗಾವಿಯ ಗದ್ದಲ ಸದ್ದು ಮಾಡಿತು. ಇಂದು ಆಯೋಜಿಸಿದ್ದ ಸಾಹಿತ್ಯದಲ್ಲಿ ರಾಜಕೀಯ, ರಾಜಕೀಯದಲ್ಲಿ ಸಾಹಿತ್ಯ ವಿಚಾರಗೋಷ್ಠಿಗೆ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಬರ್ತಾರೆ ಅಂತ ಕೆಲವರು ಗೋ ಬ್ಯಾಕ್ ಸಿ.ಟಿ.ರವಿ ಪೋಸ್ಟರ್ ಹಿಡಿದು ತಂದಿದ್ರು. ಭಾರೀ ಕುತೂಹಲ ಕೆರಳಿಸಿದ್ದ ಗೋಷ್ಠಿಯಿಂದ ಸಿ.ಟಿ.ರವಿ ದೂರ ಉಳಿಯುವ ಮೂಲಕ ಅಚ್ಚರಿ ಮೂಡಿಸಿದ್ರು. ಒಟ್ಟಾರೆ, ಎರಡನೇ ದಿನದ ಸಮ್ಮೇಳನವೂ ಜನ ಸಾಗರದ ನಡುವೆ ಯಶಸ್ವಿಯಾಯ್ತು.