Monday, December 16, 2024

ಪ್ಯಾಲೆಸ್ಟೀನ್ ಹೆಸರಿನ ಬ್ಯಾಗ್‌ ಧರಿಸಿ ಸಂಸತ್ ಪ್ರವೇಶಿಸಿದ ಸಂಸದೆ ಪ್ರಿಯಾಂಕಾ ಗಾಂಧಿ

ದೆಹಲಿ : ಯುದ್ಧ ಪೀಡಿತ ಪ್ಯಾಲೆಸ್ಟೀನ್‌ಗೆ ಬೆಂಬಲ ಸೂಚಿಸುವ ನಿಟ್ಟಿನಲ್ಲಿ, ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸೋಮವಾರ ಸಂಸತ್‌ನೊಳಗೆ ‘ಪ್ಯಾಲೆಸ್ಟೀನ್’ ಎಂಬ ಬರಹವಿರುವ ಬ್ಯಾಗ್ ಧರಿಸಿಕೊಂಡು ಬಂದಿದ್ದು, ಇದೀಗ ವಿವಾದದ ಕೇಂದ್ರ ಬಿಂದುವಾಗಿದೆ.

ಬ್ಯಾಗ್‌ ಧರಿಸಿ ನಿಂತ ಪ್ರಿಯಾಂಕಾ ಗಾಂಧಿ ಅವರ ಪೋಟೊವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್ ವಕ್ತಾರೆ ಡಾ. ಶಮಾ ಮೊಹಮ್ಮದ್, ‘ಪ್ಯಾಲೆಸ್ಟೀನ್‌ಗೆ ಬೆಂಬಲ ಸೂಚಿಸುವ ಸಲುವಾಗಿ ವಿಶೇಷವಾಗಿ ವಿನ್ಯಾಸಗೊಳಿಸಿರುವ ಬ್ಯಾಗ್‌ ಅನ್ನು ಪ್ರಿಯಾಂಕಾ ಗಾಂಧಿ ಅವರು ಧರಿಸಿದ್ದಾರೆ. ಇದು ಸಹಾನುಭೂತಿ, ನ್ಯಾಯ ಮತ್ತು ಮಾನವೀಯತೆ ಸೂಚಕವಾಗಿದೆ. ಜಿನೀವಾ ಒಪ್ಪಂದವನ್ನು ಯಾರೂ ಉಲ್ಲಂಘಿಸಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ’ ಎಂದು ಬರೆದುಕೊಂಡಿದ್ದಾರೆ.

ಗಾಜಾದ ಮೇಲೆ ಇಸ್ರೇಲ್ ದಾಳಿಯನ್ನು ಪ್ರಾರಂಭದಿಂದಲೂ ಖಂಡಿಸುತ್ತಾ ಬಂದಿರುವ ಪ್ರಿಯಾಂಕಾ, ಇಸ್ರೇಲ್ ಸರ್ಕಾರ ಗಾಜಾದಲ್ಲಿ ಜನಾಂಗೀಯ ಹತ್ಯೆ ಮಾಡುತ್ತಿದೆ ಎಂದು ಆರೋಪಿಸಿದ್ದರು. ಈ ಕ್ರಮಗಳಿಗಾಗಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನೂ ಟೀಕಿಸಿದ್ದರು. ‘ದ್ವೇಷ ಮತ್ತು ಹಿಂಸಾಚಾರದಲ್ಲಿ ನಂಬಿಕೆಯಿಲ್ಲದ ಇಸ್ರೇಲ್ ನಾಗರಿಕರು ಸೇರಿದಂತೆ ಪ್ರಪಂಚದ ಎಲ್ಲಾ ಸರ್ಕಾರಗಳು ಇಸ್ರೇಲಿ ಸರ್ಕಾರದ ನರಮೇಧದ ಕೃತ್ಯವನ್ನು ಒಗ್ಗಟ್ಟಾಗಿ ಖಂಡಿಸಬೇಕಿದೆ. ಆ ಮೂಲಕ ನರಮೇಧವನ್ನು ನಿಲ್ಲಿಸಬೇಕಿದೆ’ ಎಂದೂ ಪ್ರಿಯಾಂಕಾ ಹೇಳಿದ್ದರು.

RELATED ARTICLES

Related Articles

TRENDING ARTICLES