ಬೆಳಗಾವಿಯಲ್ಲಿ ಈ ತಾಯಂದಿರಿಗೆ ಎನಾಗಿದೆ ಗೊತ್ತಾಗುತ್ತಿಲ್ಲ, ನಾಲ್ಕು ದಿನದ ಹಿಂದೆ ಹೆತ್ತ ಮಗುವನ್ನೇ ಆಸ್ಪತ್ರೆಯಲ್ಲಿ ಬಿಟ್ಟು ತಾಯಿ ಪರಾರಿಯಾಗಿದ್ದ ಘಟನೆ ಬೆಳಕಿಗೆ ಬಂದಿತ್ತು. ಇಂದು ಹೆತ್ತಮ್ಮನೇ ಎರಡು ತಿಂಗಳ ಮಗನನ್ನ ಕೆರೆಗೆ ಎಸೆದು ಪರಾರಿಯಾಗ್ತಿದ್ದ ಘಟನೆ ನಡೆದಿದೆ. ಬೆಳಗಾವಿ ತಾಲೂಕಿನ ಕಣಬರಗಿಯಲ್ಲಿ ಈ ಘಟನೆ ನಡೆದಿದ್ದು ದೇವರ ರೂಪದಲ್ಲಿ ಬಂದ ದನ ಕಾಯುವ ಯುವಕ ಮಗುವನ್ನ ರಕ್ಷಣೆ ಮಾಡಿದ್ದಾನೆ. ಅಷ್ಟಕ್ಕೂ ಬೆಳಗಾವಿಯಲ್ಲಿ ಮತ್ತೊಂದು ಅಮಾನವೀಯ ಘಟನೆಗೆ ಕಾರಣ ಎನೂ ಈ ಕುರಿತು ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಇಂದು ಮಧ್ಯಾಹ್ನದ ವೇಳೆಯಲ್ಲಿ ತನ್ನ ಎರಡು ತಿಂಗಳ ಮಗುವನ್ನ ಎತ್ತಿಕೊಂಡು ಶಾಂತಿ ಕರವಿನಕೊಪ್ಪ(32) ಎಂಬಾಕೆ ಗ್ರಾಮದ ಹೊರ ವಲಯದ ಕೆರೆಗೆ ಬಂದಿದ್ದಾಳೆ. ಮೂರು ವರ್ಷದ ಹಿಂದೆ ಮದುವೆಯಾಗಿದ್ದ ಶಾಂತಿ ಗೃಹಿಣಿಯಾಗಿದ್ದಳು. ಇತ್ತ ಗಂಡ ಹಿಂಡಾಲ್ಕೋ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು ಇಂದು ಕೆಲಸಕ್ಕೆ ಹೋಗಿದ್ದಾಗ ಮಗುವನ್ನ ಎತ್ತಿಕೊಂಡು ಕೆರೆಗೆ ಬಂದಿದ್ದಾಳೆ. ಹೀಗೆ ಕೆರೆಗೆ ಬಂದ ಕೆಲ ಹೊತ್ತು ಅನುಮಾನಾಸ್ಪದವಾಗಿ ಕೆರೆ ಮೇಲೆ ಓಡಾಡಿದ್ದಾಳೆ. ಕೆಲವೇ ಸೆಕೆಂಡ್ ಗಳಲ್ಲಿ ಕೈಯಲ್ಲಿದ್ದ ಕೂಸನ್ನ ಕೆರೆಗೆ ಎಸೆದು ತಾಯಿ ಓಡತೋಡಗಿದ್ದಾಳೆ. ಇದನ್ನ ಗಮನಿಸಿದ ಸವಾರರೊಬ್ಬರು ಕನ್ನಯ್ಯಾ ಜಂಬಾಳೆ ಎಂಬಾತ ಓಡೋಡಿ ಹೋಗಿದ್ದಾನೆ. ಕಿರುಚಾಡಿ ಅಲ್ಲಿದ್ದ ಜನರನ್ನ ಸೇರಿಸಿದ್ದಾರೆ, ಇದೇ ಕೆರೆಯಲ್ಲಿ ದನದ ಮೈ ತೊಳೆಯುತ್ತಿದ್ದ ಜ್ಯೋತಿಬಾ ಎಂಬ ಯುವಕ ಕೂಡಲೇ ಕೆರೆಗೆ ಇಳಿದು ಮಗುವನ್ನ ರಕ್ಷಣೆ ಮಾಡಿ ಸ್ಥಳೀಯರ ಕೈಗೆ ನೀಡಿದ್ದಾನೆ.
ಇದನ್ನೂ ಓದಿ : ಪವಿತ್ರಾ ಕೊಲೆ ಮಾಡುವಷ್ಟು ಕೆಟ್ಟವಳಲ್ಲ, ಅವಳ ಬಗ್ಗೆ ನನಗೆ ತುಂಬಾ ಪ್ರೀತಿ ಇದೆ ! ಭಾಗ: 05
ಇನ್ನೂ ಕೆರೆಗೆ ಮಗುವನ್ನ ಎಸೆದು ಶಾಂತಿ ಓಡುತ್ತಿದ್ದಂತೆ ಹಿಂಬಾಲಿಸಿದ ಸ್ಥಳೀಯರು ಕೂಡಲೇ ಆಕೆಯನ್ನ ಹಿಡಿದು ಕೆರೆ ಕಡೆಗೆ ಕರೆದುಕೊಂಡು ಬಂದಿದ್ದಾರೆ. ರಕ್ಷಣೆ ಮಾಡಿದ ಮಗುವನ್ನ ಆಕೆ ಕೈಗೆ ಕೊಟ್ಟು ಬುದ್ದಿವಾದ ಹೇಳಿದ್ದಾರೆ. ಆ್ಯಂಬುಲೆನ್ಸ್ ಕರೆಯಿಸಿ ಮಗುವನ್ನ ನಗರದಲ್ಲಿರುವ ಚಿಕ್ಕ ಮಕ್ಕಳ ಆಸ್ಪತ್ರೆಗೆ ಶಿಪ್ಟ್ ಮಾಡಿದ್ದಾರೆ. ಘಟನೆ ಕುರಿತು ಕೂಡಲೇ ಮಾಳಮಾರುತಿ ಠಾಣೆ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು ಬಳಿಕ ಆಸ್ಪತ್ರೆಗೆ ಹೋಗಿ ಮಗುವಿನ ಆರೋಗ್ಯದ ಕುರಿತು ವಿಚಾರಿಸಿ ಅಲ್ಲೇ ಇದ್ದ ತಾಯಿ ಶಾಂತಿಯನ್ನ ಬಂಧಿಸಿಕೊಂಡು ಕರೆದುಕೊಂಡು ಬಂದಿದ್ದಾರೆ. ಇನ್ನೂ ಮಗುವನ್ನ ಕೆರೆಗೆ ಯಾಕೆ ಎಸೆದಿದ್ದು ಅಂತಾ ವಿಚಾರಣೆ ನಡೆಸಿದಾಗ ಮಗನಿಗೆ ನಿರಂತರವಾಗಿ ಪೀಡ್ಸ್ ಬರ್ತಿದ್ದು ನಿನ್ನೆಯಷ್ಟೇ ಆಸ್ಪತ್ರೆಯಿಂದ ಡಿಸ್ಜಾರ್ಜ್ ಮಾಡಿಕೊಂಡು ಬರಲಾಗಿತ್ತು. ಇನ್ನೂ ಒಂದು ಮೊದಲ ಮಗನ ಎರಡನೇ ವರ್ಷದ ಹುಟ್ಟು ಹಬ್ಬ ಕೂಡ ಇಂದೇ ಇದ್ದು ಇದೇ ದಿನ ಎರಡನೇ ಮಗನನ್ನ ಕೊಲ್ಲಲು ಯತ್ನಿಸಿದ್ದಾಗಿ ಹೇಳಿದ್ದಾಳೆ…
ಒಟ್ಟಾರೆ ಬೆಳಗಾವಿ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪಾಪಿ ತಾಯಿ ವಿರುದ್ದ ಕೊಲೆ ಕೇಸ್ ದಾಖಲಾಗಿದ್ದು ಇತ್ತ ಮಗುವನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ನಿಜಕ್ಕೂ ಮಗುವಿಗೆ ಪೀಡ್ಸ್ ಬರ್ತಿತ್ತಾ ಬಂದಿದ್ರೇ ಚಿಕಿತ್ಸೆ ಕೊಡಿಸಬೇಕಿತ್ತು, ಹಣ ಇಲ್ದಿದ್ರೂ ಸರ್ಕಾರಿ ಆಸ್ಪತ್ರೆಯಲ್ಲಿ ಮಗನಿಗೆ ಚಿಕಿತ್ಸೆ ಕೊಡಿಸುವ ಕೆಲಸ ಮಾಡಬೇಕಿತ್ತು. ಆದ್ರೇ ಈ ರೀತಿ ಮಗುವನ್ನೇ ಹೆತ್ತಮ್ಮ ಕೊಲ್ಲಲು ಮುಂದಾಗಿದ್ದು ದುರಂತವೇ ಸರಿ…