ದೆಹಲಿ : ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಸಂವಿಧಾನದ ಮೂಲಕ ಪ್ರಜಾಪ್ರಭುತ್ವದ ಬೇರುಗಳನ್ನು ಸದೃಢಗೊಳಿಸಿದ್ದರಿಂದಾಗಿ ಟೀ ಮಾರುವವರೂ ಈ ದೇಶದ ಪ್ರಧಾನಿ ಆಗಬಹುದಾಗಿದೆ’ ಎಂದು ಕಾಂಗ್ರೆಸ್ ಸಂಸದ ಸುಖದೇವ್ ಭಗತ್ ಹೇಳಿದ್ದಾರೆ.
ಸಂವಿಧಾನ ಅಂಗೀಕರಿಸಿ 75 ವರ್ಷಗಳು ಪೂರ್ಣಗೊಂಡ ಸಂದರ್ಭದಲ್ಲಿ ಲೋಕಸಭೆಯಲ್ಲಿ ಆಯೋಜಿಸಿರುವ ಚರ್ಚೆಯಲ್ಲಿ ಶನಿವಾರ ಮಾತನಾಡಿದ ಅವರು, ‘ಆಡಳಿತಾರೂಢ ಪಕ್ಷವು ಕಾಂಗ್ರೆಸ್ ಮತ್ತು ನೆಹರೂ ಅವರ ಮೇಲೆ ವಾಗ್ದಾಳಿ ನಡೆಸುತ್ತಿದೆ. ಆದರೆ ಈ ದೇಶದಲ್ಲಿ ಪ್ರಜಾಪ್ರಭುತ್ವ ಇಂದಿಗೂ ಉಳಿದಿದೆ ಎಂದರೆ ಅದು ಕಾಂಗ್ರೆಸ್ ಮತ್ತು ನೆಹರು ಅವರ ಕೊಡುಗೆ ಮಾತ್ರ’ ಎಂದು ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರ ಮಾತಿಗೆ ತಿರುಗೇಟು ನೀಡಿದರು.
‘ನೆಹರೂ ಗಾಂಧಿ ಕುಟುಂಬದವರು ಸಂವಿಧಾನದ ಪ್ರತಿಯನ್ನು ತಲೆಮಾರುಗಳಿಂದ ತಮ್ಮ ಜೇಬಿನಲ್ಲಿಟ್ಟುಕೊಂಡು ಓಡಾಡುತ್ತಿದ್ದಾರೆ’ ಎಂಬ ರಾಜನಾಥ್ ಸಿಂಗ್ ಅವರ ಮಾತಿಗೆ ಪ್ರತಿಕ್ರಿಯಿಸಿದ ಭಗತ್, ‘ನಿಜವಾಗಿಯೂ ಹೌದು. ಸಂವಿಧಾನ ಪ್ರತಿಯನ್ನು ಅವರು ಇಟ್ಟುಕೊಂಡಿದ್ದಾರೆ. ಏಕೆಂದರೆ ಅದು ಅಷ್ಟು ಮಹತ್ವದ್ದು ಮತ್ತು ಬೆಲೆಕಟ್ಟಲಾಗದ್ದು’ ಎಂದರು.