ದೆಹಲಿ : ಶನಿವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಹರಿಯಾಣದ ಶಂಭು ಗಡಿ ಭಾಗದಿಂದ ದೆಹಲಿಯತ್ತ ಮೆರವಣಿಗೆ ನಡೆಸಲು ಹೊಸ ಪ್ರಯತ್ನ ಮಾಡಿದ ರೈತರ ಗುಂಪು ಹರಿಯಾಣ ಪೊಲೀಸರಿಂದ ಮತ್ತೆ ಅಶ್ರುವಾಯು ಮತ್ತು ಜಲಫಿರಂಗಿಗಳನ್ನು ಎದುರಿಸಿದೆ. ಅಂಬಾಲಾ ಜಿಲ್ಲೆಯಲ್ಲಿ ಇಂದು ಮಧ್ಯರಾತ್ರಿಯವರೆಗೆ ಇಂರ್ಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಿದ್ದಾರೆ ಎಂದು ಮಾಹಿತಿ ದೊರೆತಿದೆ.
ಇದಕ್ಕೂ ಮೊದಲು, ಡಿಸೆಂಬರ್ 6 ಮತ್ತು 8 ರಂದು ಆಂದೋಲನಗೊಂಡ ರೈತರು ಎರಡು ಪ್ರಯತ್ನಗಳನ್ನು ಮಾಡಿದ್ದರು – ಹರಿಯಾಣ ಭದ್ರತಾ ಸಿಬ್ಬಂದಿ ಅಶ್ರುವಾಯು ಶೆಲ್‌ಗಳನ್ನು ಹಾರಿಸಿ ಮತ್ತು ಅವರನ್ನು ಚದುರಿಸಲು ನೀರಿನ ಫಿರಂಗಿಗಳನ್ನು ಬಳಸಿದರು. ಆಗ ಒಟ್ಟು 22 ರೈತರು ಗಾಯಗೊಂಡಿದ್ದರು. ರೈತರ ಮೆರವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಹರಿಯಾಣ ಸರ್ಕಾರವು ಶನಿವಾರ ಮುಂಜಾನೆ ಅಂಬಾಲಾ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿದೆ ಎಂದು ಮಾಹಿತಿ ದೊರೆತಿದ್ದು. ಡಿಸೆಂಬರ್ 17ವರೆಗೆ ಈ ನಿರ್ಬಂಧ ವಿಧಿಸಿದೆ ಎಂದು ತಿಳಿದು ಬಂದಿದೆ.
ದೆಹಲಿ ಶಾಲೆಗಳಿಗೆ ಬಾಂಬ್ ಬೆದರಿಕೆ !
ಏತನ್ಮಧ್ಯೆ, ದೆಹಲಿ ಪಬ್ಲಿಕ್ ಸ್ಕೂಲ್, ಆರ್‌ಕೆ ಪುರಮ್‌ನಲ್ಲಿರುವ ಶಾಲೆಗಳಿಗೆ ಶನಿವಾರ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದ್ದು, ಈ ವಾರ ರಾಷ್ಟ್ರೀಯ ರಾಜಧಾನಿಯಲ್ಲಿ ಬೆದರಿಕೆಯ ಮೂರನೇ ಘಟನೆಯಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಅಗ್ನಿಶಾಮಕ ಇಲಾಖೆ, ಸ್ಥಳೀಯ ಪೊಲೀಸರು, ಶ್ವಾನದಳ ಮತ್ತು ಬಾಂಬ್ ಪತ್ತೆ ತಂಡಗಳು ಶಾಲೆಗೆ ತಲುಪಿ ಶೋಧ ಕಾರ್ಯಾಚರಣೆ ಆರಂಭಿಸಿವೆ ಎಂದು ದೆಹಲಿ ಅಗ್ನಿಶಾಮಕ ಸೇವೆ (ಡಿಎಫ್‌ಎಸ್) ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.