ದಿಂಡಿಗಲ್: ಖಾಸಗಿ ಆಸ್ಪತ್ರೆಯಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಮಗು ಸೇರಿ 7 ಮಂದಿ ಸಾವನ್ನಪ್ಪಿರುವ ಭೀಕರ ಘಟನೆ ನಡೆದಿದೆ. ದಿಂಡಿಗಲ್-ತಿರುಚಿ ರಸ್ತೆಯಲ್ಲಿರುವ ಖಾಸಗಿ ಸಿಟಿ ಆಸ್ಪತ್ರೆಯಲ್ಲಿ ನಡೆದಿದೆ.
ಗುರುವಾರ ರಾತ್ರಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಒಂದು ಮಗು, ಮೂವರು ಪುರುಷರು ಮತ್ತು ಮೂವರು ಮಹಿಳೆಯರು ಸೇರಿದಂತೆ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದಾರೆ.ನಾಲ್ಕು ಅಂತಸ್ತಿನ ಆಸ್ಪತ್ರೆಯ ಲಿಫ್ಟ್‌ನಲ್ಲಿ ಕೆಲವು ವ್ಯಕ್ತಿಗಳು ಕೂಡ ಸಿಲುಕಿಕೊಂಡಿದ್ದರು.ಮೊದಲು ಆಸ್ಪತ್ರೆಯ ರಿಸಿಪ್ಷನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಶಂಕಿಸಲಾಗಿದೆ.
ಬೆಂಕಿಯ ಜ್ವಾಲೆಯು ಇತರ ಮಹಡಿಗಳಿಗೆ ವೇಗವಾಗಿ ಹರಡಿ ಇಡೀ ಕಟ್ಟಡವನ್ನು ಆವರಿಸಿತು. ಆಸ್ಪತ್ರೆಯಲ್ಲಿ ದಟ್ಟವಾದ ಹೊಗೆ ತುಂಬಿದ್ದರಿಂದ ಉಸಿರುಗಟ್ಟುವಿಕೆಯಿಂದ 7 ಮಂದಿ ಮೃತಪಟ್ಟರು ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ತಿಳಿಸಿದ್ದಾರೆ. ಬೆಂಕಿ ಕಾಣಿಸಿಕೊಂಡ ಕೂಡಲೇ ಸಿಬ್ಬಂದಿ ಆಸ್ಪತ್ರೆಯಲ್ಲಿರುವ ರೋಗಿಗಳನ್ನು ಸ್ಥಳಾಂತರಿಸಿದ್ದರಿಂದ ಸಾವುನೋವಿನ ಪ್ರಮಾಣ ಕಡಿಮೆಯಾಗಿದೆ ಎಂದು ಮಾಹಿತಿ ದೊರೆತಿದೆ.
ಜಿಲ್ಲಾಧಿಕಾರಿ ಎಂ.ಎನ್.ಪೂಂಗೋಡಿ ಹಾಗೂ ಪಳನಿ ಶಾಸಕ ಐ.ಬಿ.ಸೆಂಥಿಲ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.. ಘಟನೆಗೆ ಕಾರಣ ಪತ್ತೆ ಹಚ್ಚಲು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.