ಮಧ್ಯಪ್ರದೇಶ್ : ರಾಮಮಂದಿರದಲ್ಲಿ ಪ್ರಧಾನಿ ಮೋದಿ ಮೂರ್ತಿ ಪ್ರತಿಷ್ಠಾಪನೆ ಮಾಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಕಾರ್ಯಕ್ರಮದಿಂದ ದೂರ ಉಳಿದಿದ್ದ ಪುರಿ ಶಂಕರಾಚಾರ್ಯ ನಿಶ್ಚಲಾನಂದ ಸರಸ್ವತಿ ಈಗ ಮತ್ತೊಮ್ಮೆ ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.
ಉಜೈನಿಯ ಮಹಾಕಾಲೇಶ್ವರ ದೇವಾಲಯ ಆಡಳಿತ ಮಂಡಳಿ ಆಯೋಜಿಸಿದ್ದ ಧರ್ಮಸಭೆಯಲ್ಲಿ ಭಾಗಿಯಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ಪುರಿ ಶಂಕರಾಚಾರ್ಯ ನಿಶ್ಚಲಾನಂದ ಸರಸ್ವತಿ, ಭಾರತದಲ್ಲಿ ಸದೃಢ ನ್ಯಾಯಾಂಗ ವ್ಯವಸ್ಥೆ ಇದ್ದಿದ್ದರೆ, ಈ ವೇಳೆಗೆ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಜೈಲಿನಲ್ಲಿರುತ್ತಿದ್ದರು ಎಂದು ಹೇಳಿದ್ದಾರೆ.
ಇದೇ ವೇಳೆ 2014 ರಲ್ಲಿ ನರೇಂದ್ರ ಮೋದಿ ಅವರನ್ನು ಬೆಂಬಲಿಸಿದ್ದು ತಾವು ಮಾಡಿದ ತಪ್ಪು ಎಂದು ಪುರಿ ಶಂಕರಾಚಾರ್ಯ ಹೇಳಿದ್ದಾರೆ. 2014 ರಲ್ಲಿ ಮೋದಿ ಪ್ರಧಾನಿಯಾಗುವುದಕ್ಕೂ ಮೊದಲು ಪುರಿಗೆ ತೆರಳಿ ಶಂಕರಾಚಾರ್ಯ ನಿಶ್ಚಲಾನಂದ ಸರಸ್ವತಿ ಅವರ ಆಶೀರ್ವಾದ ಪಡೆದಿದ್ದರು.
ಇನ್ನು ನಿಶ್ಚಲಾನಂದ ಸರಸ್ವತಿ ಅವರ ಈ ಹೇಳಿಕೆಗಳ ವರದಿಗಳನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಬಿಜೆಪಿ ನಾಯಕ ಸುಬ್ರಹ್ಮಣಿಯನ್ ಸ್ವಾಮಿ, ನಿರ್ಭೀತ ಜಗದ್ಗುರು ಎಂದು ನಿಶ್ಚಲಾನಂದ ಸರಸ್ವತಿ ಅವರನ್ನು ಹೊಗಳಿದ್ದಾರೆ.