ಹೈದರಾಬಾದ್ : ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ತೆಲುಗು ನಟ ಮೋಹನ್ ಬಾಬು ಖಾಸಗಿ ವಾಹಿನಿಯೊಂದರ ವರದಿಗಾರ ಸೇರಿದಂತೆ ಪತ್ರಕರ್ತರ ಕ್ಷಮೆ ಕೋರಿದ್ದಾರೆ. ಕ್ಷಮೆ ಕೋರಿ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಪ್ರಕಟಿಸಿದ್ದಾರೆ.
ನನ್ನ ಕುಟುಂಬಕ್ಕೆ ಸಂಬಂಧಿಸಿದ ಘಟನೆ ಇಷ್ಟು ದೊಡ್ಡ ವಿಷಯವಾಗಿ ಪತ್ರಕರ್ತರನ್ನು ಸಂಕಷ್ಟಕ್ಕೆ ದೂಡಿದ್ದಕ್ಕೆ ನನಗೆ ವಿಷಾದವಿದೆ. ಘಟನೆಯ ನಂತರ 48 ಗಂಟೆಗಳ ಕಾಲ ಆಸ್ಪತ್ರೆಯಲ್ಲಿದ್ದ ಕಾರಣ ನಾನು ಪ್ರತಿಕ್ರಿಯಿಸಲು ಸಾಧ್ಯವಾಗಲಿಲ್ಲ. ಅಂದು ನಡೆದ ಘಟನೆಯಲ್ಲಿ ಪತ್ರಕರ್ತರೊಬ್ಬರು ಗಾಯಗೊಂಡಿರುವುದು ತುಂಬಾ ಬೇಸರದ ಸಂಗತಿ. ನಾನು ಅವರ ಕುಟುಂಬಕ್ಕೆ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ ಎಂದು ಟ್ವಿಟ್ ಮಾಡಿದ್ದಾರೆ.
ಮೋಹನ್ ಬಾಬು ಮತ್ತು ಅವರ ಕಿರಿಯ ಮಗ ಮನೋಜ್ ನಡುವಿನ ವಿವಾದದ ಬಗ್ಗೆ ವರದಿ ಮಾಡಲು ಜಲಪಲ್ಲಿ ನಿವಾಸಕ್ಕೆ ಭೇಟಿ ನೀಡಿದಾಗ ಈ ಘಟನೆ ನಡೆದಿತ್ತು. ಮೋಹನ್ ಬಾಬು ಹಾಗೂ ಹಿರಿಯ ಮಗ ವಿಷ್ಣು ಪತ್ರಕರ್ತರ ಮೇಲೆ ಆಕ್ರಮಣಕಾರಿ ದಾಳಿ ನಡೆಸಿದ್ದಾರೆ ಎಂದು ಪತ್ರಕರ್ತರೊಬ್ಬರು ಪೊಲೀಸರಿಗೆ ದೂರು ನೀಡಿದ್ದರು.
ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪತ್ರಕರ್ತರ ದೂರು ಆಧರಿಸಿ, ಭಾರತೀಯ ನ್ಯಾಯಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ನಟ ಮೋಹನ್ ಬಾಬು ಅವರು ನಮ್ಮ ಮೈಕ್ರೋಫೋನ್ ಅನ್ನು ಕಿತ್ತುಕೊಂಡು, ಅವಾಚ್ಯ ಪದಗಳಿಂದ ನಮ್ಮನ್ನು ನಿಂದಿಸಿದ್ದಾರೆ ಎಂದು ಮಾಧ್ಯಮವೊಂದರ ಛಾಯಾಗ್ರಾಹಕರು ತಿಳಿಸಿದ್ದರು. ಇದರ ವಿಡಿಯೊ ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು.