ಜೈಪುರ: ರಾಜಸ್ಥಾನ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮ ಮತ್ತು ಇತರ ಜನ ಪ್ರತಿನಿಧಿಗಳ ವಿರುದ್ಧ ಪ್ರಖ್ಯಾತ ಹಿನ್ನೆಲೆ ಗಾಯಕ ಸೋನು ನಿಗಮ್ ಅಸಮಾಧಾನ ಹೊರ ಹಾಕಿದ್ದಾರೆ.
ಜೈಪುರದಲ್ಲಿ ನಡೆದ ಮೂರು ದಿನಗಳ ‘ರೈಸಿಂಗ್ ರಾಜಸ್ಥಾನ ಗ್ಲೋಬಲ್ ಇನ್ವೆಸ್ಟ್‌ಮೆಂಟ್’ ಶೃಂಗಸಭೆಯಲ್ಲಿ ಭಾಗವಹಿಸುವ ಪ್ರತಿನಿಧಿಗಳಿಗಾಗಿ ಹೋಟೆಲ್ ರಾಂಬಾಗ್ ಪ್ಯಾಲೇಸ್‌ನಲ್ಲಿ ಸಾಂಸ್ಕೃತಿಕ ಸಂಜೆಯ ಭಾಗವಾಗಿ ಆಯೋಜಿಸಲಾಗಿದ್ದ ಪ್ರದರ್ಶನದಲ್ಲಿ ಮುಖ್ಯಮಂತ್ರಿ ಭಜನಲಾಲ್ ಶರ್ಮ ಮತ್ತು ಇತರ ಪ್ರತಿನಿಧಿಗಳು ಕಾರ್ಯಕ್ರಮ ನಡೆಯುತ್ತಿದ್ದ ವೇಳೆಯೇ ನಿರ್ಗಮಿಸಿರುವುದು ಖ್ಯಾತ ಗಾಯಕ ಸೋನು ನಿಗಮ್ ಅವರ ಆಕ್ರೋಶಕ್ಕೆ ಕಾರಣವಾಗಿದೆ.
ಸೋನು ನಿಗಮ್ ಅವರು ಇನ್‌ಸ್ಟಾಗ್ರಾಮ್ ಪೋಸ್ಟ್ ನಲ್ಲಿ, ‘ಇಂತಹ ನಡವಳಿಕೆಯು ಸಂಗೀತ ಮತ್ತು ಕಲೆಗಳ ದೇವತೆ ಸರಸ್ವತಿಗೆ ಮಾಡಿದ ಅಪಮಾನ” ಎಂದು ತೀವ್ರ ಅಸಮಾಧಾನವನ್ನು ಹೊರ ಹಾಕಿದ್ದಾರೆ. “ಯಾರಾದರೂ ಸಂಗೀತ ಕಚೇರಿಯ ಮಧ್ಯದಲ್ಲೆ ಎದ್ದು ಹೋಗಲು ಬಯಸುವುದಾದರೆ, ಅವರು ಮೊದಲು ಪ್ರದರ್ಶನಕ್ಕೆ ಹಾಜರಾಗಬಾರದು.ಸಿಎಂ ಸಾಹೇಬರು ಮತ್ತು ಇತರರು ಕಾರ್ಯಕ್ರಮದ ಮಧ್ಯದಲ್ಲಿ ಎದ್ದು ಹೋಗುವುದನ್ನು ನಾನು ನೋಡಿದೆ. ಅವರು ಹೋದ ತತ್ಕ್ಷಣ, ಎಲ್ಲಾ ಪ್ರತಿನಿಧಿಗಳು ಸಹ ಹೊರಟರು. ನಿಮ್ಮ ಕಲಾವಿದರನ್ನು ನೀವೇ ಮೆಚ್ಚಿಕೊಳ್ಳದಿದ್ದರೆ ಹೊರಗಿನವರು ಏನು ಮಾಡುತ್ತಾರೆ ಎಂಬುದು ರಾಜಕಾರಣಿಗಳಲ್ಲಿ ನನ್ನ ವಿನಂತಿ. ಅವರು ಏನು ಯೋಚಿಸುತ್ತಾರೆ? “ಎಂದು 51 ವರ್ಷದ ಖ್ಯಾತ ಗಾಯಕ ಬರೆದುಕೊಂಡಿದ್ದಾರೆ.
“ನಿಮಗೆ ಬಹಳಷ್ಟು ಕೆಲಸವಿದೆ ಎಂದು ನನಗೆ ತಿಳಿದಿದೆ ನೀವು ಪ್ರದರ್ಶನದಲ್ಲಿ ನಿಮ್ಮ ಸಮಯವನ್ನು ವ್ಯರ್ಥ ಮಾಡಬಾರದು. ಬೇಗ ಹೊರಡಬೇಕು ಎಂದು ಅತ್ಯಂತ ವಿನಯಪೂರ್ವಕವಾಗಿ, ನಿಮ್ಮೆಲ್ಲರಲ್ಲಿ ವಿನಂತಿ” ಎಂದು ಸೋನು ನಿಗಮ್ ನೇರ ಅಭಿಪ್ರಾಯ ಹೊರ ಹಾಕಿದ್ದಾರೆ.