Thursday, January 16, 2025

ICC Ranking: ಮೊದಲ ಸ್ಥಾನ ಕಾಯ್ದುಕೊಂಡ ಬುಮ್ರಾ, 20ನೇ ಸ್ಥಾನಕ್ಕೆ ಕುಸಿದ ಕೊಹ್ಲಿ

ಅಡಿಲೇಡ್​ : ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬಿಡುಗಡೆ ಮಾಡಿರುವ ಟೆಸ್ಟ್ ಬೌಲರ್‌ಗಳ ನೂತನ ರ‍್ಯಾಂಕಿಂಗ್​ ಪಟ್ಟಿಯಲ್ಲಿ ಭಾರತದ ಜಸ್‌ಪ್ರೀತ್ ಬೂಮ್ರಾ ಅಗ್ರಸ್ಥಾನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅದೇ ವೇಳೆ ಬ್ಯಾಟರ್‌ಗಳ ರ‍್ಯಾಂಕಿಂಗ್​ ಪಟ್ಟಿಯಲ್ಲಿ ಆರು ಸ್ಥಾನಗಳ ಹಿಂಬಡ್ತಿ ಪಡೆದಿರುವ ವಿರಾಟ್ ಕೊಹ್ಲಿ 20ನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ.

ಅಮೋಘ ಬ್ಯಾಟಿಂಗ್‌ ಲಯದಲ್ಲಿರುವ ಇಂಗ್ಲೆಂಡ್‌ನ ಹ್ಯಾರಿ ಬ್ರೂಕ್, ಬ್ಯಾಟರ್‌ಗಳ ಪಟ್ಟಿಯಲ್ಲಿ ಒಂದು ಸ್ಥಾನ ಮುನ್ನಡೆ ಪಡೆದು ಅಗ್ರಸ್ಥಾನಕ್ಕೇರಿದ್ದಾರೆ. ತಮ್ಮದೇ ದೇಶದವರಾದ ಜೋ ರೂಟ್ ಅವರನ್ನು ಹಿಂದಿಕ್ಕಿ ಬ್ರೂಕ್ ಅಗ್ರಸ್ಥಾನ ಅಲಂಕರಿಸಿದ್ದಾರೆ. ಬ್ರೂಕ್ 898 ಮತ್ತು ರೂಟ್ 897 ರೇಟಿಂಗ್ ಅಂಕಗಳನ್ನು ಹೊಂದಿದ್ದಾರೆ. ಪ್ರಸಕ್ತ ಸಾಲಿನ ಜುಲೈ ತಿಂಗಳಿನಿಂದ ರೂಟ್ ಅಗ್ರಸ್ಥಾನ ಕಾಯ್ದುಕೊಂಡಿದ್ದರು. ನ್ಯೂಜಿಲೆಂಡ್‌ ವಿರುದ್ಧ ವೆಲ್ಲಿಂಗ್ಟನ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಬ್ರೂಕ್ 8ನೇ ಶತಕದ ಸಾಧನೆ ಮಾಡಿದ್ದರು.

ಇದೇ ಪಂದ್ಯದಲ್ಲಿ ಜೋ ರೂಟ್ ಟೆಸ್ಟ್ ಕ್ರಿಕೆಟ್‌ನಲ್ಲಿ 36ನೇ ಶತಕ ಗಳಿಸಿ ಭಾರತದ ರಾಹುಲ್ ದ್ರಾವಿಡ್ ದಾಖಲೆಯನ್ನು ಸರಿಗಟ್ಟಿದ್ದರು. ನ್ಯೂಜಿಲೆಂಡ್‌ನ ಕೇನ್‌ ವಿಲಿಯನ್ ಹಾಗೂ ಭಾರತದ ಯಶಸ್ವಿ ಜೈಸ್ವಾಲ್, ಅನುಕ್ರಮವಾಗಿ ಮೂರು ಹಾಗೂ ನಾಲ್ಕನೇ ಸ್ಥಾನ ಕಾಯ್ದುಕೊಂಡಿದ್ದಾರೆ. ಭಾರತ ವಿರುದ್ಧ ಅಡಿಲೇಡ್‌ನಲ್ಲಿ ನಡೆದ ಹಗಲು-ರಾತ್ರಿ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಶತಕ ಸಾಧನೆ ಮಾಡಿದ್ದ ಅಸ್ಟ್ರೇಲಿಯಾದ ಟ್ರಾವಿಸ್ ಹೆಡ್, ಐದು ಸ್ಥಾನಗಳ ನೆಗೆತ ಕಂಡು, ಅಗ್ರ ಐದರ ಪಟ್ಟಿಗೆ ಲಗ್ಗೆ ಇಟ್ಟಿದ್ದಾರೆ.ಮತ್ತೊಂದೆಡೆ ರಿಷಭ್ ಪಂತ್ ಮೂರು ಸ್ಥಾನಗಳ ಹಿನ್ನಡೆಗೊಳಗಾಗಿ 9ನೇ ಸ್ಥಾನಕ್ಕೆ ಕುಸಿದಿದ್ದಾರೆ. ಶುಭಮನ್ ಗಿಲ್ ಒಂದು ಸ್ಥಾನ ಏರಿಕೆ ಕಂಡು 17ನೇ ಸ್ಥಾನಕ್ಕೆ ತಲುಪಿದ್ದಾರೆ.

RELATED ARTICLES

Related Articles

TRENDING ARTICLES