ಹೈದರಾಬಾದ್ : ಪುಷ್ಪ 2 ದಿ ರೂಲ್’ ಚಿತ್ರ ನೋಡಲು ಹೋಗಿದ್ದ ವ್ಯಕ್ತಿಯ ಮೃತದೇಹ ಚಿತ್ರಮಂದಿರದಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.ಆಂಧ್ರಪ್ರದೇಶದ ರಾಯದುರ್ಗಂ ಸ್ಥಳೀಯ ಚಿತ್ರಮಂದಿರದಲ್ಲಿ ವ್ಯಕ್ತಿ ಮೃತಪಟ್ಟಿದ್ದಾನೆ.
ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ‘ಮ್ಯಾಟ್ನಿ ಶೋ ಬಳಿಕ 35 ವರ್ಷದ ಹರಿಜನ ಮಾದಣ್ಣಪ್ಪ ಅವರ ಮೃತದೇಹ ಸಂಜೆ ಆರು ಗಂಟೆ ಸುಮಾರಿಗೆ ಪತ್ತೆಯಾಗಿದೆ. ಚಿತ್ರಮಂದಿರದಲ್ಲಿ ಸಿಬ್ಬಂದಿ ಸ್ವಚ್ಛಗೊಳಿಸುವ ವೇಳೆಯಲ್ಲಿ ಶವ ಪತ್ತೆಯಾಗಿದೆ’ ಎಂದು ಕಲ್ಯಾಣದುರ್ಗಂ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‌ಪಿ) ರವಿಬಾಬು ತಿಳಿಸಿದ್ದಾರೆ.
ಮ್ಯಾಟಿನಿ ಶೋಗಾಗಿ ಮಧ್ಯಾಹ್ನ 2.30ಕ್ಕೆ ಮಾದಣ್ಣಪ್ಪ ಚಿತ್ರಮಂದಿರಕ್ಕೆ ಬಂದಿದ್ದರು. ಅವರ ಸಾವು ಯಾವಾಗ ಸಂಭವಿಸಿದೆ ಎಂಬುದು ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ನಾಲ್ಕು ಮಕ್ಕಳ ತಂದೆಯಾಗಿರುವ ಮಾದಣ್ಣಪ್ಪ, ಕುಡಿತದ ಚಟ ಹೊಂದಿದ್ದರು. ಸಿನಿಮಾ ವೀಕ್ಷಿಸಲು ಚಿತ್ರಮಂದಿರಕ್ಕೆ ಬಂದಾಗಲೂ ಮದ್ಯದ ಅಮಲಿನಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 194ರ ಅಡಿಯಲ್ಲಿ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಲಾಗುತ್ತಿದೆ.