ಕೋಲಾರ : ಧರಣಿ ನಿರತ ರೈತ ಮುಖಂಡರನ್ನು ಕೋಲಾರದ ಶ್ರೀನಿವಾಸಪುರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಥಳಿಸಿದ್ದಾರೆ. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಒತ್ತುವರಿ ಮಾಡಿಕೊಂಡಿರುವ ಅರಣ್ಯ ಭೂಮಿ ತೆರವಿಗೆ ಒತ್ತಾಯಿಸಿ, ರೈತ ಸಂಘದವರು ನಡೆಸುತ್ತಿದ್ದ ಪ್ರತಿಭಟನೆ ವೇಳೆ ಈ ಘಟನೆಯು ನಡೆದಿದೆ. ಪೊಲೀಸರ ಸಮ್ಮುಖದಲ್ಲಿಯೇ ಹಲ್ಲೆ ನಡೆದಿದ್ದು. ಘಟನೆ ಸಂಬಂಧವಾಗಿ ರೈತ ಸಂಘ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ದೂರು- ಪ್ರತಿದೂರು ದಾಖಲಿಸಿದ್ದಾರೆ.
ಕೋಲಾರದ ಶ್ರೀನಿವಾಸಪುರ ತಹಸೀಲ್ದಾರ್ ಕಚೇರಿ ಎದುರು ಸೋಮವಾರ ರೈತ ಸಂಘದವರು ಪ್ರತಿಭಟನೆ ನಡೆಸುತ್ತಿದ್ದರು. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಶ್ರೀನಿವಾಸಪುರದಲ್ಲಿ ಒತ್ತುವರಿ ಮಾಡಿಕೊಂಡಿರುವ ಅರಣ್ಯ ಭೂಮಿಯನ್ನು ತೆರವುಗೊಳಿಸುವಂತೆ ಧರಣಿನಿರತರು ಆಗ್ರಹಿಸಿದ್ದರು. ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ದ ಧಿಕ್ಕಾರಗಳನ್ನ ಕೂಗುತ್ತಿದ್ದರು. ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ಕಾಂಗ್ರೆಸ್ ಕಾರ್ಯಕರ್ತರ ಜೊತೆಗೆ ವಾಗ್ವಾದ ನಡೆಯಿತು. ಈ ವೇಳೆ ರೈತ ಸಂಘದವರ ಮೇಲೆ ರಮೇಶ್ ಕುಮಾರ್ ಬೆಂಬಲಿಗರು ಪೊಲೀಸರ ಎದುರೇ ಹಲ್ಲೆ ನಡೆಸಿದ್ದಾರೆ.
ಅರಣ್ಯ ಭೂಮಿಯ ಒತ್ತುವರಿ ತೆರವುಗೊಳಿಸುವಂತೆ ಜಿಲ್ಲಾಡಳಿತಕ್ಕೆ ನಾಲ್ಕೈದು ಬಾರಿ ಮನವಿ ಸಲ್ಲಿಸಲಾಗಿದೆ. ಸೋಮವಾರ ತಹಸೀಲ್ದಾರ್ ಕಚೇರಿ ಎದುರು ಅರೆಬೆತ್ತಲೆ ಧರಣಿ ನಡೆಸಲು ಮುಂದಾದಾಗ ಹಲ್ಲೆ ನಡೆದಿದೆ. ಧರಣಿ ಸ್ಥಳಕ್ಕೆ ಆಗಮಿಸಿದ ಕಾಂಗ್ರೆಸ್ಸಿಗರು ವಾಗ್ವಾದ ನಡೆಸಿದರು. ರೋಲ್ ಕಾಲ್ ಗಿರಾಕಿಗಳು ಅಂತಾ ರೈತ ಸಂಘದವರ ವಿರುದ್ದ ಧಿಕ್ಕಾರ ಕೂಗಿದ್ರು. ಈ ವೇಳೆ ರೈತ ಸಂಘದವರನ್ನು ಎಳೆದಾಡಿ ಹಲ್ಲೆ ನಡೆಸಿದರು. ಗೂಂಡಾಗಿರಿ ನಡೆಸಿದವರ ವಿರುದ್ದ ಕ್ರಮ ಕೈಗೊಳ್ಳುವಂತೆ ರೈತ ಸಂಘದವರು ಒತ್ತಾಯಿಸಿದ್ರು.
ರಮೇಶ್ ಕುಮಾರ್ ಬೆಂಬಲಿಗರು ರೈತ ಸಂಘದ ಕಾರ್ಯಕರ್ತರ ವಿರುದ್ದ ಪ್ರತಿ ದೂರು ದಾಖಲಿಸಿದ್ದಾರೆ. ಕಚೇರಿ ಬಳಿ ತೆರಳಿದ್ದವರ ಮೇಲೆ ಏಕಾಏಕಿ ರೈತ ಸಂಘದವರೇ ಹಲ್ಲೆ ಮಾಡಿದ್ದಾರೆ. ರೈತರ ಭೂಮಿ ತೆರವು ವೇಳೆ ಪ್ರತಿಭಟಿಸದ ರೈತ ಸಂಘದವರು, ಇದೀಗ ರೋಲ್ ಕಾಲ್ ಗಾಗಿ ಇಳಿದಿದ್ದಾರೆ ಅಂತಾ ಆಕ್ರೋಶ ವ್ಯಕ್ತಪಡಿಸಿದ್ರು.
ಒಟ್ಟಿನಲ್ಲಿ, ಧರಣಿ ನಿರತ ರೈತ ಮುಖಂಡರು ಮತ್ತು ಹಲ್ಲೆಗೈದ ಕಾಂಗ್ರೆಸ್ ಕಾರ್ಯಕರ್ತರ ಆರೋಪ-ಪ್ರತ್ಯಾರೋಪಗಳಲ್ಲಿ ವಾಸ್ತವಾಂಶ ಏನೆಂಬುದು ತನಿಖೆಯಿಂದ ಹೊರಬರಬೇಕಾಗಿದೆ.