ಬೆಂಗಳೂರು : ಕೆಜಿಎಫ್ ಚಿತ್ರದ ಮೂಲಕ ಭಾರತದೆಲ್ಲೆಡೆ ತನ್ನ ಹೆಸರಿನ ಧ್ವಜ ಹಾರಿಸಿದ ಯಶ್ ಸದ್ಯ ವಿಶ್ವದ ಮೇಲೆ ಕಣ್ಣಿಟ್ಟಿದ್ದಾರೆ. ಕನ್ನಡ ಚಿತ್ರರಂಗದತ್ತ ಜಗತ್ತೇ ಈ ಬಾರಿ ತಿರುಗಿ ನೋಡಬೇಕೆಂಬ ಆಶಯದೊಂದಿಗೆ ಟಾಕ್ಸಿಕ್ ಚಿತ್ರವನ್ನು ಶುರು ಮಾಡಿದ್ದಾರೆ. ಮುಂಬೈನಲ್ಲಿ ಬಿಡಾರವನ್ನು ಹೂಡಿ ಚಿತ್ರದ ಚಿತ್ರೀಕರಣವನ್ನು ಮಾಡುತ್ತಿದ್ದಾರೆ.
ಇನ್ನು ಟಾಕ್ಸಿಕ್ ಚಿತ್ರಕ್ಕೆ ಕೇವಲ ಕೆ.ವಿ.ಎನ್ ಸಂಸ್ಥೆ ಹಣ ಹೂಡುತ್ತಿಲ್ಲ. ಯಶ್ ಪಾಲು ಕೂಡ ನಿರ್ಮಾಣದಲ್ಲಿದೆ.ಈ ಕಾರಣಕ್ಕೆ ತಮ್ಮ ಚಿತ್ರಕ್ಕೆ ಯಾರು ಬೇಕು ಯಾರು ಬೇಡ ಎನ್ನುವ ತೀರ್ಮಾನ ತೆಗೆದುಕೊಳ್ಳುವ ಹಕ್ಕು ಯಶ್ ಅವರಿಗಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಮೊದಲ ದಿನದಿಂದನೇ ಟಾಕ್ಸಿಕ್ ಚಿತ್ರಕ್ಕೆ ಈ ಪಾತ್ರಕ್ಕೆ ಇವರೇ ಬೇಕು ಎಂದು ಪಟ್ಟು ಹಿಡಿದು ಕಲಾವಿದರನ್ನು ಮತ್ತು ತಂತ್ರಜ್ಞರನ್ನು ಯಶ್ ಪ್ರತಿಭಾವಂತರನ್ನು ಹುಡುಕುತ್ತಿದ್ದಾರೆ. ಹೆಕ್ಕಿ ಹೆಕ್ಕಿ ತಮ್ಮ ಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಅನಿಲ್ ಕಪೂರ್ ಸದ್ಯದ ಉದಾಹರಣೆ.
ಹೌದು, 1983ರಲ್ಲಿ ರಿಲೀಸ್ ಆದ ‘ಪಲ್ಲವಿ ಅನುಪಲ್ಲವಿ’ ಚಿತ್ರದ ಮೂಲಕ ಕನ್ನಡ ಚಿತ್ರರಂಗವನ್ನು ಪ್ರವೇಶಿಸಿ, ಆ ನಂತರ ಬಾಲಿವುಡ್ ಸ್ಟಾರ್ ಆಗಿ ಬೆಳೆದ ಅನಿಲ್ ಕಪೂರ್ ಬಹುಕಾಲದ ನಂತರ ಕನ್ನಡ ಚಿತ್ರರಂಗಕ್ಕೆ ಟಾಕ್ಸಿಕ್ ಚಿತ್ರದ ಮೂಲಕ ಮರಳಿದ್ದಾರೆ. ಚಿತ್ರದ ಚಿತ್ರೀಕರಣದಲ್ಲಿ ಕೂಡ ಭಾಗಿಯಾಗಿದ್ದಾರೆ. ಹೀಗೊಂದು ಅನುಮಾನ ಸದ್ಯಕ್ಕೆ ಎಲ್ಲರನ್ನು ಕಾಡುತ್ತಿದೆ. ಈ ಅನುಮಾನ ಇನ್ನೂ ಹೆಚ್ಚಾಗುವಂತೆ ಅನಿಲ್ ಕಪೂರ್ ಮುಂಬೈನಲ್ಲಿ ಟಾಕ್ಸಿಕ್ ಅಡ್ಡೆಗೆ ತೆರಳುತ್ತಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಹೌದು ಅಸಲಿಗೆ ನಿಮಗೆ ಗೊತ್ತಿರಲಿ ಟಾಕ್ಸಿಕ್ ಚಿತ್ರದ ಚಿತ್ರೀಕರಣಕ್ಕೆ ಕಳೆದ ಕೆಲ ದಿನಗಳಿಂದ ಮುಂಬೈನಲ್ಲಿ ಯಶ್ ಬಿಡಾರ ಹೂಡಿದ್ದಾರೆ. ಕಿಯಾರಾ ಅಡ್ವಾಣಿ ಕೂಡ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಪಾಪರಾಜಿಗಳ ಕಣ್ತಪ್ಪಿಸಿ ಇಬ್ಬರು ದಿನನಿತ್ಯ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದಾರೆ. ಕೇವಲ ಕಿಯಾರಾ ಅಡ್ವಾಣಿ ಮಾತ್ರ ಅಲ್ಲ ಬಾಲಿವುಡ್‌ನ ಮಹಾರಾಣಿ ಹುಮಾ ಖುರೇಶಿ ಕೂಡ ಟಾಕ್ಸಿಕ್ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ.
ವಿಶೇಷ ಅಂದರೆ ಹೀಗೆ ಚಿತ್ರದ ಚಿತ್ರೀಕರಣಕ್ಕೆ ಮೊನ್ನೆಯ ದಿವಸ ಟಾಕ್ಸಿಕ್ ಚಿತ್ರದ ಕಥಾನಾಯಕಿ ಕಿಯಾರಾ ಅಡ್ವಾಣಿ ತೆರಳುವ ಸಮಯದಲ್ಲಿ ಅನಿಲ್ ಕಪೂರ್ ಕೂಡ ಕಾಣಿಸಿಕೊಂಡಿದ್ದಾರೆ. ಕಿಯಾರಾ ಜೊತೆ ಬೋಟ್ ಹತ್ತಿದ್ದಾರೆ. ಜೊತೆಯಲ್ಲಿ ಪ್ರಯಾಣ ಮಾಡಿದ್ದಾರೆ.
ಸದ್ಯ ಅನಿಲ್ ಕಪೂರ್ ಮತ್ತು ಕಿಯಾರಾ ಅಡ್ವಾಣಿ ಜೊತೆಯಲ್ಲಿ ಪ್ರಯಾಣ ಮಾಡುತ್ತಿರುವ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಯಶ್ ಅಭಿಮಾನಿಗಳ ಉತ್ಸಾಹವನ್ನು ಕೂಡ ಹೆಚ್ಚಿಸಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಹಲವರು ಟಾಕ್ಸಿಕ್ ಚಿತ್ರದಲ್ಲಿ ಅನಿಲ್ ಕಪೂರ್ ಆಕ್ಟ್ ಮಾಡುತ್ತಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಟಾಕ್ಸಿಕ್ ಚಿತ್ರದಲ್ಲಿ ಅನಿಲ್ ಕಪೂರ್ ಖಳನಾಯಕನ ಪಾತ್ರವನ್ನು ನಿರ್ವಹಿಸುತ್ತಿರಬಹುದು ಎನ್ನುವ ಅನುಮಾನವನ್ನು ವ್ಯಕ್ತಪಡಿಸುತ್ತಿದ್ದಾರೆ.