ಮುಂಬೈ : ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೊಲ್ಲಲು ಪಾಕಿಸ್ತಾನದ ಗುಪ್ತಚರ ಸಂಸ್ಥೆ ISI ಸಂಚು ರೂಪಿಸಿದ್ದು, ಈ ಸಂಬಂಧ ಮುಂಬೈ ಪೊಲೀಸರಿಗೆ ಬೆದರಿಕೆ ಸಂದೇಶ ಬಂದಿದೆ ಎಂದು ಹೇಳಲಾಗಿದೆ.ಸಂದೇಶ ಕಳುಹಿಸಲಾದ ಮೊಬೈಲ್ ಸಂಖ್ಯೆಯ ಲೊಕೇಷನ್ ರಾಜಸ್ಥಾನದ ಅಜ್ಮೀರ್ ನಲ್ಲಿದೆ ಎಂದು ಪತ್ತೆ ಮಾಡಲಾಗಿದೆ.
ಅಂತೆಯೇ ಬೆದರಿಕೆ ಸಂದೇಶ ರವಾನಿಸಿರುವ ಶಂಕಿತನನ್ನು ಹಿಡಿಯಲು ತಕ್ಷಣ ಪೊಲೀಸ್ ತಂಡವನ್ನು ಅಲ್ಲಿಗೆ ಕಳುಹಿಸಲಾಗಿದೆ.ಇಂದು ಮುಂಜಾನೆ ಮುಂಬೈ ಟ್ರಾಫಿಕ್ ಪೊಲೀಸರ ಸಹಾಯವಾಣಿಗೆ ಬಂದ ವಾಟ್ಸಾಪ್ ಸಂದೇಶದಲ್ಲಿ ಇಬ್ಬರು ಐಎಸ್‌ಐ ಏಜೆಂಟ್‌ಗಳು ಪ್ರಧಾನಿ ನರೇಂದ್ರ ಮೋದಿಯನ್ನು ಗುರಿಯಾಗಿಸಿಕೊಂಡು ಬಾಂಬ್ ಸ್ಫೋಟ ನಡೆಸುವ ಸಂಚನ್ನು ನಡೆಸಲಿದ್ದಾರೆ ಎಂದು ಸಂದೇಶದಲ್ಲಿ ಉಲ್ಲೇಖಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇನ್ನು ಸಂದೇಶದ ಕುರಿತು ಮಾತನಾಡಿರುವ ಇಲಾಖೆಯ ಹಿರಿಯ ಅಧಿಕಾರಿಗಳು, ‘ಇಂತಹ ಸಂದೇಶಗಳನ್ನು ಕಳುಹಿಸುವವರು ಮಾನಸಿಕ ಅಸ್ವಸ್ಥ ವ್ಯಕ್ತಿ ಅಥವಾ ಮದ್ಯದ ಅಮಲಿನಲ್ಲಿದ್ದವರಾಗಿರುತ್ತಾರೆ. ಮುಂಬೈ ಟ್ರಾಫಿಕ್ ಪೊಲೀಸರ ಸಹಾಯವಾಣಿಗೆ ಈ ಹಿಂದೆ ಇಂತಹ ಹಲವು ಹುಸಿ ಬೆದರಿಕೆ ಸಂದೇಶಗಳು ಬಂದಿದ್ದವು.ಅದಾಗ್ಯೂ ನಮ್ಮ ಅಧಿಕಾರಿಗಳು ಈ ಸಂದೇಶವನ್ನು ಗಂಭೀರವಾಗಿ ಪರಿಗಣಿಸಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.ಸಂಬಂಧಿತ ಭಾರತೀಯ ನ್ಯಾಯ ಸಂಹಿತಾ ವಿಭಾಗಗಳ ಅಡಿಯಲ್ಲಿ ಪ್ರಥಮ ಮಾಹಿತಿ ವರದಿಯನ್ನು ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.