ದೆಹಲಿ : ದೇಶಾದ್ಯಂತ 20 ಹೊಸ ಕೈಗಾರಿಕಾ ಟೌನ್‌ಶಿಪ್‌ಗಳನ್ನು ಕೇಂದ್ರ ಸರಕಾರ ಸ್ಥಾಪಿಸುತ್ತಿದೆ. ಈಗಾಗಲೇ ನೋಯ್ಡಾದಲ್ಲಿ ಕಾಮಗಾರಿ ಭರದಿಂದ ಸಾಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪಿಯೂಷ್ ಗೋಯಲ್ ”ಉತ್ತಮ ಗುಣಮಟ್ಟ ಮತ್ತು ಸುಸ್ಥಿರತೆಯನ್ನು ನಾವು ಕಾಯ್ದುಕೊಳ್ಳಬೇಕು. ಎಂಎಸ್‌ಎಂಇ (ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು) ಗಳಿಗೆ ಪರ್ಯಾಯ ಹಣಕಾಸು ಮಾದರಿಗಳನ್ನು ಕಂಡುಕೊಳ್ಳಲು ನಾವು ಮುಕ್ತರಾಗಿದ್ದೇವೆ ಮತ್ತು ಎಲ್ಲಾ ಎಂಜಿನಿಯರಿಂಗ್ ಕಾಲೇಜುಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಉದ್ಯಮಶೀಲತೆಯನ್ನು ಶೈಕ್ಷಣಿಕ ಕೋರ್ಸ್‌ಗಳ ಪಠ್ಯಕ್ರಮವಾಗಿಸುವುದು ನಮ್ಮ ಮುಂದಿನ ಮಾರ್ಗವಾಗಿದೆ,” ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ ‘ಪಂಚ ಪ್ರಾಣ’ವನ್ನು ಸ್ಮರಿಸಿಕೊಂಡ ಪಿಯೂಷ್ ಗೋಯಲ್, ”2047ರ ವೇಳೆಗೆ ಭಾರತ ಅಭಿವೃದ್ಧಿ ಹೊಂದಿದ ದೇಶವಾಗುವುದು 140 ಕೋಟಿ ಜನರ ಸಾಮೂಹಿಕ ಸಂಕಲ್ಪವಾಗಬೇಕು. ನಾವು ಅನುವಂಶಿಕವಾಗಿ ಅವಾಹಿಸಿಕೊಂಡು ಬಂದಿರುವ ವಸಾಹತುಶಾಹಿ ಮನೋಸ್ಥಿತಿಯನ್ನು ಕಿತ್ತುಹಾಕಬೇಕು. ನಮ್ಮ ಇತಿಹಾಸ ಮತ್ತು ಭವ್ಯ ಪರಂಪರೆ ಕುರಿತು ಹೆಮ್ಮೆ ಪಡುವುದನ್ನು ಕಲಿಯಬೇಕು. ಸಮಾಜ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿ ಮಾಡುವಾಗ ಯಾವುದೇ ಜಾತಿ, ಧರ್ಮವನ್ನು ಆಧರಿಸಿ ತಾರತಮ್ಯ ಮಾಡುವುದಿಲ್ಲ ಎಂಬುದನ್ನು ಕೇಂದ್ರ ಸರಕಾರ ಖಾತ್ರಿ ಪಡಿಸಿದೆ,” ಎಂದು ಪ್ರತಿಪಾದಿಸಿದರು.
ಹಸಿರುಮನೆ ಅನಿಲಗಳು ಮತ್ತು ಸುಸ್ಥಿರತೆಯ ವಿಷಯದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡ ಪಿಯೂಷ್ ಗೋಯಲ್, “ಇದು ಬಳಕೆಗೆ ಸಂಬಂಧಿಸಿದೆ. ಆದರೆ ನಾವು ತಯಾರಕರನ್ನು ದೂಷಿಸುತ್ತಿದ್ದೇವೆ. ಅಭಿವೃದ್ಧಿ ಹೊಂದಿದ ದೇಶಗಳು ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳಿಂದ ಉಂಟಾಗುವ ಮಾಲಿನ್ಯದ ಬಗ್ಗೆ ಮಾತನಾಡುತ್ತಿವೆ. ಅವುಗಳ ಕೈಗಾರಿಕೀಕರಣಕ್ಕೆ ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳು ನೀಡಿರುವ ಕೊಡುಗೆಯನ್ನು ಅರಿಯಲು ವಿಫಲವಾಗಿವೆ,” ಎಂದು ಟೀಕಿಸಿದರು.
ಉತ್ತರಾಖಂಡದ ಖುರ್ಪಿಯಾ, ಪಂಜಾಬ್‌ನ ರಾಜಪುರ, ಉತ್ತರ ಪ್ರದೇಶದ ಪ್ರಯಾಗ್‌ರಾಜ್ ಮತ್ತು ಆಗ್ರಾ, ಬಿಹಾರದ ಗಯಾ, ಮಹಾರಾಷ್ಟ್ರದ ದಿಘಿ ಬಂದರು ಕೈಗಾರಿಕಾ ಪ್ರದೇಶ, ರಾಜಸ್ಥಾನದ ಜೋಧ್‌ಪುರ ಪಾಲಿ ಮಾರ್ವಾರ್, ಆಂಧ್ರಪ್ರದೇಶದ ಓರ್ವಕಲ್ ಮತ್ತು ಕೊಪ್ಪರ್ತಿ, ತೆಲಂಗಾಣದ ಜಹೀರಾಬಾದ್, ಕೇರಳದ ಪಾಲಕ್ಕಾಡ್ ಮತ್ತು ಹರಿಯಾಣದ ಹಿಸ್ಸಾರ್‌ನಲ್ಲಿ ಹೊಸ ಕೈಗಾರಿಕ ಟೌನ್ಶಿಪ್ಗಳು ತಲೆ ಎತ್ತಲಿವೆ ಎಂದು ಹೇಳಿದರು.