Sunday, January 19, 2025

10 ವರ್ಷಗಳಿಂದ ಧೋನಿ ಜೊತೆ ಮಾತಾಡಿಲ್ಲ, ಈಗ ಮಾತನಾಡಿ ಏನು ಪ್ರಯೋಜನ : ಹರ್ಭಜನ್ ಸಿಂಗ್​

ಭಾರತದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರು ಎಂಎಸ್ ಧೋನಿ ಅವರೊಂದಿಗೆ ಮಾತನಾಡಿದ 10 ವರ್ಷಗಳಾಯಿತು. ಇನ್ನು ಮುಂದೆನೂ ಮಾತನಾಡುವುದಿಲ್ಲ ಎಂದು ಇತ್ತೀಚಿನ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

ಮಾಜಿ ಆಫ್ ಸ್ಪಿನ್ನರ್ ಧೋನಿಯೊಂದಿಗೆ ನನಗೆ ಯಾವುದೇ ಸಮಸ್ಯೆ ಇಲ್ಲ, ಆದರೆ ನಾವಿಬ್ಬರೂ ಈಗ ಸ್ನೇಹಿತರಲ್ಲ ಎಂದು ಹೇಳಿದರು. ಹರ್ಭಜನ್ ಮತ್ತು ಧೋನಿ ಇಬ್ಬರೂ 2007ರ T20 ವಿಶ್ವಕಪ್ ಮತ್ತು 2011 ಏಕದಿನ ವಿಶ್ವಕಪ್‌ನ ಪ್ರಮುಖ ಭಾಗವಾಗಿದ್ದರು. ಧೋನಿ ನಾಯಕತ್ವದಲ್ಲಿ ಈ ಎರಡು ವಿಶ್ವಕಪ್ ಅನ್ನು ಭಾರತ ಗೆದ್ದಿತ್ತು. ಇದೇ ಟೂರ್ನಿಯಲ್ಲಿ ಹರ್ಭಜನ್ ಕೂಡ ಅದ್ಭುತವಾಗಿ ಬೌಲಿಂಗ್ ಪ್ರದರ್ಶನ ನೀಡಿದ್ದರು.

ಹರ್ಭಜನ್ T20ಯಲ್ಲಿ 7 ಮತ್ತು ODI ವಿಶ್ವಕಪ್‌ನಲ್ಲಿ 9 ವಿಕೆಟ್‌ಗಳನ್ನು ಪಡೆದರು. ಎಂಎಸ್ ಧೋನಿ ನಾಯಕತ್ವದಲ್ಲಿ ಹರ್ಭಜನ್ 133 ಪಂದ್ಯಗಳನ್ನು ಆಡಿದ್ದು ಇದರಲ್ಲಿ ಅವರು 229 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ. ಇಬ್ಬರ ನಡುವೆ ಯಾವುದೇ ಸ್ನೇಹವಿಲ್ಲ, ಈಗ ಧೋನಿ ಜೊತೆ ಮಾತನಾಡುವುದಿಲ್ಲ ಎಂದು ಹರ್ಭಜನ್ ಇತ್ತೀಚಿನ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. 10 ವರ್ಷಗಳಾಯಿತು ನಾವಿಬ್ಬರೂ ಮಾತನಾಡಿಲ್ಲ. ಕಾರಣಗಳೇನು ಎಂಬುದು ನನಗೆ ಗೊತ್ತಿಲ್ಲ. ನಾವು ಐಪಿಎಲ್‌ನಲ್ಲಿ ಸಿಎಸ್‌ಕೆಯಲ್ಲಿ ಆಡುವಾಗ, ನಾವು ಮಾತನಾಡುತ್ತಿದ್ದೆವು, ಅದು ಕೂಡ ಮೈದಾನಕ್ಕೆ ಸೀಮಿತವಾಗಿತ್ತು. ಅದರ ನಂತರ ಧೋನಿ ನನ್ನ ಕೋಣೆಗೆ ಬರಲಿಲ್ಲ, ನಾನು ಅವರ ಕೋಣೆಗೆ ಹೋಗಲಿಲ್ಲ ಎಂದರು.

ಸಂಬಂಧವು ಯಾವಾಗಲೂ ಕೊಡು ಮತ್ತು ತೆಗೆದುಕೊಳ್ಳುವುದು. ನಾನು ನಿಮ್ಮನ್ನು ಗೌರವಿಸಿದರೆ, ನೀವು ನನ್ನನ್ನು ಗೌರವಿಸುತ್ತೀರಿ ಎಂದು ನಾನು ನಿರೀಕ್ಷಿಸುತ್ತೇನೆ. ಅದೇ ರೀತಿ ನಾನು ಕರೆ ಮಾಡಿದಾಗ ಉತ್ತರಿಸದಿದ್ದರೆ ಆನಂತರ ಒಂದೆರೆಡು ಬಾರಿ ಪ್ರಯತ್ನಿಸುತ್ತೇವೆ. ಅದನ್ನು ಬಿಟ್ಟು ನಿರಂತರವಾಗಿ ಕರೆ ಮಾಡಲು ಹೋಗುವುದಿಲ್ಲ. ಹೀಗಾಗಿ ನನ್ನ ಕರೆಗೆ ಪ್ರತಿಕ್ರಿಯಿಸುವವರೊಂದಿಗೆ ಮಾತ್ರ ನಾನು ಸಂಪರ್ಕ ಇಟ್ಟುಕೊಳ್ಳುತ್ತೇನೆ ಎಂದು ಹೇಳಿದರು.

2015ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಹರ್ಭಜನ್ ಮತ್ತು ಧೋನಿ ಕೊನೆಯ ಬಾರಿಗೆ ಭಾರತವನ್ನು ಪ್ರತಿನಿಧಿಸಿದ್ದರು. 2015ರ ವಿಶ್ವಕಪ್ ನಂತರ, ಹರ್ಭಜನ್ ಮತ್ತು ಯುವರಾಜ್ ಸಿಂಗ್ ಅವರನ್ನು ಭಾರತ ತಂಡದಿಂದ ಕೈಬಿಡಲಾಯಿತು. ಹರ್ಭಜನ್ 2015ರ ನಂತರ ಆಡದಿದ್ದರೂ, ಅವರು 2021ರಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ಹರ್ಭಜನ್ 2018 ಮತ್ತು 2020ರ ನಡುವೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ಪರ ಆಡಿದ್ದರು ಎಂಬುದು ಗಮನಾರ್ಹ.

RELATED ARTICLES

Related Articles

TRENDING ARTICLES