ಲಖ್ನೋ : ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಕಾಂಗ್ರೆಸ್ ಸಂಸದರು ಹಿಂಸಾಚಾರ ಪೀಡಿತ ಸಂಭಾಲ್‌ಗೆ ಭೇಟಿ ನೀಡುವ ನಿರೀಕ್ಷೆಯಿದೆ. ಆದ್ರೆ, ಸಂಭಾಲ್ ಪ್ರವೇಶಿಸಲು ಯಾವುದೇ ಹೊರಗಿನವರಿಗೆ ಅವಕಾಶವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಉದ್ವಿಗ್ನ ಸ್ಥಿತಿ ನೆಲೆಗೊಂಡಿರುವ ಉತ್ತರ ಪ್ರದೇಶದ ಸಂಭಲ್‌ಗೆ ತೆರಳಿರುವ ರಾಹುಲ್ ಗಾಂಧಿ ಅವರನ್ನು ಗಾಜಿಪುರ ಗಡಿಯಲ್ಲಿ ಇಂದು ಪೊಲೀಸರು ತಡೆ ಹಿಡಿದಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ರಾಹುಲ್ ಗಾಂಧಿ, ‘ನಾವು ಸಂಭಲ್‌ಗೆ ಹೋಗಲು ಪ್ರಯತ್ನಿಸುತ್ತಿದ್ದೇವೆ. ಆದರೆ ಪೊಲೀಸರು ನಮಗೆ ಅವಕಾಶ ನೀಡುತ್ತಿಲ್ಲ’ ಎಂದು ಹೇಳಿದ್ದಾರೆ.
‘ಲೋಕಸಭೆ ವಿರೋಧ ಪಕ್ಷದ ನಾಯಕರಾಗಿ ಸಂಭಲ್‌ಗೆ ಭೇಟಿ ನೀಡುವುದು ನನ್ನ ಹಕ್ಕು ಆಗಿದೆ’ ಎಂದು ಅವರು ನನಗೆ ಅವಕಾಶ ನೀಡುತ್ತಿಲ್ಲ. ‘ಪೊಲೀಸರ ಜತೆ ಒಬ್ಬನೇ ತೆರಳಲು ನಾನು ಸಿದ್ದನಿದ್ದೇನೆ ಎಂದು ತಿಳಿಸಿದ್ದೇನೆ. ಆದರೂ ನನಗೆ ಅವಕಾಶ ನಿರಾಕರಿಸಲಾಗಿದೆ’ ಎಂದು ರಾಹುಲ್ ದೂರಿದ್ದಾರೆ.
‘ಕೆಲವು ದಿನಗಳ ನಂತರ ನನ್ನ ಭೇಟಿಗೆ ಅವಕಾಶ ನೀಡುವುದಾಗಿ ಅವರು (ಪೊಲೀಸರು) ಹೇಳುತ್ತಾರೆ. ಆದರೆ ಇದು ಲೋಕಸಭೆ ವಿರೋಧ ಪಕ್ಷದ ನಾಯಕನ ಹಕ್ಕುಗಳಿಗೆ ವಿರುದ್ಧವಾಗಿದೆ. ಅವರು ನನಗೆ ಅವಕಾಶ ನೀಡಲೇಬೇಕು’ ಎಂದು ಹೇಳಿದ್ದಾರೆ. ‘ಇದು ಸಂವಿಧಾನಕ್ಕೆ ವಿರುದ್ದವಾಗಿದೆ. ಸಂಭಲ್‌ಗೆ ತೆರಳಿ ಜನರನ್ನು ಭೇಟಿ ಮಾಡಿ ಅಲ್ಲಿ ಏನಾಯಿತು ಎಂದು ತಿಳಿದುಕೊಳ್ಳಲು ಬಯಸುತ್ತೇನೆ. ಆದರೆ ನನ್ನ ಸಾಂವಿಧಾನಿಕ ಹಕ್ಕನ್ನು ನಿರಾಕರಿಸಲಾಗುತ್ತಿದೆ’ ಎಂದು ಅವರು ಆರೋಪಿಸಿದ್ದಾರೆ.