Thursday, December 5, 2024

ಬ್ಯಾಟಿಂಗ್‌ ಕ್ರಮಾಂಕ ಬದಲಾವಣೆ ನನಗೀಗ ಮಾನಸಿಕ ಸವಾಲಲ್ಲ: ಕೆ.ಎಲ್.ರಾಹುಲ್

ಪರ್ಥ್​ :  ಪದೇ ಪದೇ ಬ್ಯಾಟಿಂಗ್ ಕ್ರಮಾಂಕ ಬದಲಾವಣೆಯ ಮಾನಸಿಕ ಸವಾಲನ್ನು ನಾನು ಜಯಿಸಿದ್ದೇನೆ ಮತ್ತು ತಂಡಕ್ಕಾಗಿ ಆಡಲು ಸಾಧ್ಯವಾಗುವವರೆಗೆ ಯಾವುದೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಸಿದ್ಧನಿದ್ದೇನೆ ಎಂದು ಭಾರತ ಕ್ರಿಕೆಟ್ ತಂಡದ ಹಿರಿಯ ಬ್ಯಾಟರ್ ಕೆ.ಎಲ್. ರಾಹುಲ್ ಹೇಳಿದ್ದಾರೆ.

ಪರ್ತ್‌ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಎರಡು ಇನಿಂಗ್ಸ್‌ನಲ್ಲಿ ಕ್ರಮವಾಗಿ 26 ಮತ್ತು 77 ರನ್ ಗಳಿಸಿದ್ದ ರಾಹುಲ್, ಪಿತೃತ್ವದ ವಿರಾಮದಲ್ಲಿದ್ದ ನಾಯಕ ರೋಹಿತ್ ಶರ್ಮಾ ಅವರ ಅನುಪಸ್ಥಿತಿಯಲ್ಲಿ ಇನ್ನಿಂಗ್ಸ್ ಆರಂಭಿಸಿದ್ದರು.ಶುಕ್ರವಾರ ಆರಂಭವಾಗಲಿರುವ ಅಡಿಲೇಡ್‌ನ ಡೇ-ನೈಟ್ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಆಡುತ್ತಿದ್ದು, ರಾಹುಲ್‌ಗೆ ಅವರ ಬ್ಯಾಟಿಂಗ್ ಸ್ಥಾನದ ಬಗ್ಗೆ ಪತ್ರಕರ್ತರು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಆರಂಭಿಕ ಅಥವಾ ಮಧ್ಯಮ ಕ್ರಮಾಂಕ ಯಾವುದಾದರೂ ಓಕೆ ಎಂದು ತಿಳಿಸಿದ್ದಾರೆ.

‘ನಾನು ಆಡುವ ಹನ್ನೊಂದರ ಬಳಗದಲ್ಲಿ ಇರಬೇಕಷ್ಟೆ. ಇದರರ್ಥ ಯಾವ ಸ್ಥಾನವಾದರೂ ಓಕೆ. ತಂಡಕ್ಕಾಗಿ ಬ್ಯಾಟಿಂಗ್ ಮಾಡುತ್ತೇನೆ’ ಎಂದಿದ್ದಾರೆ. ದಶಕದ ಹಿಂದೆ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಮಧ್ಯಮ ಕ್ರಮಾಂಕದಲ್ಲಿ ಆಡುತ್ತಿದ್ದರು. ಬಳಿಕ, ಓಪನ‌ರ್ ಆಗಿದ್ದರು. ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲೂ ಅವರ ಸ್ಥಾನ ಬದಲಾವಣೆ ಆಗಿತ್ತು. ಇದು ಅವರ ಮಾನಸಿಕ ಸ್ಥಿತಿ ಮೇಲೆ ಪರಿಣಾಮ ಬೀರಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ‘ನಾನು ಹಲವು ಸ್ಥಾನಗಳಲ್ಲಿ ಬ್ಯಾಟಿಂಗ್ ಮಾಡಿದ್ದೇನೆ. ಮೊದ ಮೊದಲು ಮಾನಸಿಕವಾಗಿ ಸ್ವಲ್ಪ ಸವಾಲಾಗಿತ್ತು. ಮೊದಲ 20-25 ಎಸೆತ ಎದುರಿಸುವ ಬಗ್ಗೆ ಆತಂಕವಿತ್ತು. ಈಗ ಅದನ್ನು ಮೀರಿದ್ದೇನೆ. ಆರಂಭದಲ್ಲಿ ಆಕ್ರಮಣಕಾರಿ ಬ್ಯಾಟಿಂಗ್ ಹೇಗೆ? ಎಷ್ಟು ಎಚ್ಚರಿಕೆ ವಹಿಸಬೇಕು? ಎಂದು ತಲೆಕೆಡಿಸಿಕೊಳ್ಳುತ್ತಿದ್ದೆ. ಈಗ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಎಲ್ಲ ಸ್ಥಾನಗಳಲ್ಲೂ ಆಡಿದ ಬಳಿಕ ಆ ಬಗ್ಗೆ ಒಂದು ಸ್ಪಷ್ಟತೆ ಸಿಕ್ಕಿದೆ. ಓಪನಿಂಗ್ ಅಥವಾ ಮಧ್ಯಮ ಕ್ರಮಾಂಕ ಎಲ್ಲೇ ಆಡಿದರೂ ಮೊದಲ 30-40 ಎಸೆತಗಳನ್ನು ನಿರ್ವಹಿಸಿದರೆ ಆ ನಂತರ ಬ್ಯಾಟಿಂಗ್ ಸಾಮಾನ್ಯವಾಗಿರುತ್ತದೆ ಎಂದಿದ್ದಾರೆ.

RELATED ARTICLES

Related Articles

TRENDING ARTICLES