ಥೈಲ್ಯಾಂಡ್ : ಸಮುದ್ರ ದಂಡೆಯ ಬಳಿ ಕಲ್ಲಿನ ಮೇಲೆ ಕುಳಿತು ಯೋಗ, ಧ್ಯಾನ ಮಾಡುತ್ತಿದ್ದ ರಷ್ಯನ್ ನಟಿಯೊಬ್ಬರು ಅಲೆಗಳ ಹೊಡೆತಕ್ಕೆ ಸಿಲುಕಿ ದಾರುಣವಾಗಿ ಮೃತಪಟ್ಟಿದ್ದಾರೆ. ರಷ್ಯಾದ 24 ವರ್ಷದ ಕಮಿಲ್ಲಾ ಬೆಲ್ಯಾಟಸ್ಕಾ ಥಾಯ್ಲೆಂಡ್ನ ಕೋಯ್ ಸಮುಯಿ ದ್ವೀಪಕ್ಕೆ ರಜೆಯ ಸಮಯವನ್ನು ಕಳೆಯಲು ಗೆಳೆಯನೊಂದಿಗೆ ಬಂದಿದ್ದರು ಕಮಿಲ್ಲಾ ಸಮುದ್ರದ ದಡದಲ್ಲಿ ಕಲ್ಲು ಬಂಡೆಯ ಮೇಲೆ ಕುಳಿತಿದ್ದ ವೇಳೆ ಭಾರಿ ಗಾತ್ರದ ಅಲೆಯೊಂದು ಅವರನ್ನು ಎಳೆದೊಯ್ದ ದೃಶ್ಯಗಳು ಹತ್ತಿರದಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಹತ್ತಿರದಲ್ಲಿದ್ದ ಇತರೆ ಪ್ರವಾಸಿಗರು ಕಮಿಲ್ಲಾ ಅವರನ್ನು ರಕ್ಷಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಕೆಲ ಹೊತ್ತಿನ ಬಳಿಕ ಅವರ ಮೃತದೇಹ ಕಿಲೋಮೀಟರ್ ದೂರದಲ್ಲಿ ದೊರೆತಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಕಮಿಲ್ಲಾ ಅವರು ಸಮುದ್ರಕ್ಕೆ ಬಿದ್ದ 15 ನಿಮಿಷದೊಳಗೆ ಸ್ಥಳಕ್ಕೆ ಧಾವಿಸಿದರೂ ಭಾರಿ ಪ್ರಮಾಣದಲ್ಲಿ ಅಲೆಗಳು ಏಳುತ್ತಿದ್ದವು, ಸಮುದ್ರ ಪ್ರಕ್ಷುಬ್ಧವಾಗಿತ್ತು. ಹೀಗಾಗಿ ಅವರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ಎಂದು ರಕ್ಷಣಾ ತಂಡ ಹೇಳಿದೆ.