ದೆಹಲಿ : ಸರ್ಕಾರ ಸ್ವಾಧೀನ ಪಡಿಸಿಕೊಳ್ಳುವ ಭೂಮಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಇಲ್ಲಿನ ‘ದಲಿತ ಪ್ರೇರಣಾ ಸ್ಥಳ’ದಲ್ಲಿ ಧರಣಿ ನಡೆಸುತ್ತಿದ್ದ ಭಾರತೀಯ ಕಿಸಾನ್ ಪರಿಷತ್ ಅಧ್ಯಕ್ಷ ಸುಖಬೀರ್ ಖಲೀಫಾ ಸೇರಿದಂತೆ 160ಕ್ಕೂ ಹೆಚ್ಚು ರೈತರನ್ನು ಪೊಲೀಸರು ಬಂಧಿಸಿದ್ದಾರೆ.
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಸೆಕ್ಷನ್ 170ರ ಅಡಿಯಲ್ಲಿ ಮಧ್ಯಾಹ್ನ 1.30 ರ ಸುಮಾರಿಗೆ 160ಕ್ಕೂ ಹೆಚ್ಚು ರೈತರನ್ನು ಬಂಧಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ ಶಿವ ಹರಿ ಮೀನಾ ತಿಳಿಸಿದ್ದಾರೆ. ಬಂಧಿತರಲ್ಲಿ ಮಹಿಳೆಯರು, ಭಾರತೀಯ ಕಿಸಾನ್ ಯೂನಿಯನ್ (ಪಶ್ಚಿಮ ಉತ್ತರ ಪ್ರದೇಶ) ರಾಜ್ಯ ಅಧ್ಯಕ್ಷರಾದ ಖಲೀಫಾ ಮತ್ತು ಪವನ್ ಖತಾನಾ ಸೇರಿದಂತೆ ಹಲವು ರೈತ ಮುಖಂಡರು ಸೇರಿದ್ದಾರೆ.
ಬಂಧಿತ ರೈತರನ್ನು ನೋಯ್ಡಾದ ಲುಕ್ಸರ್ ಜೈಲಿಗೆ ಕರೆದೊಯ್ಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಮ್ಮ ಬೇಡಿಕೆ ಈಡೇರುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ಖಲೀಫಾ ತಿಳಿಸಿದ್ದಾರೆ. ರೈತರ ಬಂಧನವನ್ನು ಖಂಡಿಸಿ ನರೇಶ್ ಟಿಕಾಯತ್ ನೇತೃತ್ವದ ಭಾರತೀಯ ಕಿಸಾನ್ ಯೂನಿಯನ್ ಮುಜಾಫರ್‌ನಗರದಲ್ಲಿ ಸಭೆ ಕರೆದಿದೆ.
ಸರ್ಕಾರ ಸ್ವಾಧೀನ ಪಡಿಸಿಕೊಳ್ಳುವ ಜಮೀನಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಉತ್ತರ ಪ್ರದೇಶದ ಸುಮಾರು 20 ಜಿಲ್ಲೆಗಳ ರೈತರು ಸೋಮವಾರ ನೊಯ್ಡಾದ ಮಹಾಮಯಾ ಮೇಲೇತುವೆ ಬಳಿಯಿಂದ ಧರಣಿ ಆರಂಭಿಸಿದ್ದಾರೆ. ಸಂಯುಕ್ತ ಕಿಸಾನ್ ಮೋರ್ಚಾದ (ಗೌತಮ್ ಬುದ್ಧ ನಗರ ವಿಭಾಗ) ಬೆಂಬಲದೊಂದಿಗೆ 12 ರೈತ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗವಹಿಸಿವೆ.