ಉತ್ತರ ಪ್ರದೇಶದ ಸಂಭಲ್‌ನಲ್ಲಿ ನಡೆದ ಹಿಂಸಾಚಾರವು ಪೂರ್ವಯೋಜಿತ ಕೃತ್ಯವಾಗಿದ್ದು, ಕೋಮು ಸೌಹಾರ್ದವನ್ನು ಕದಡುವ ಉದ್ದೇಶವನ್ನು ಹೊಂದಿತ್ತು’ ಎಂದು ಸಂಸದ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದರು.
ಲೋಕಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ ಮಾತನಾಡಿದ ಯಾದವ್, ‘ಸಂಭಲ್ ಭ್ರಾತೃತ್ವಕ್ಕೆ ಹೆಸರುವಾಸಿಯಾದ ಸ್ಥಳವಾಗಿದೆ. ಈ ಪೂರ್ವ ಯೋಜಿತ ಕೃತ್ಯ ಸಾಮರಸ್ಯದ ಮೇಲೆ ಪ್ರಭಾವ ಬೀರಿದೆ’ ಎಂದು ಹೇಳಿದರು.’ಇದೊಂದು ಪೂರ್ವಯೋಜಿತ ಪಿತೂರಿಯಾಗಿದೆ.
ನ್ಯಾಯಾಲಯದ ಆದೇಶದ ಇಂತಹ ಸಮೀಕ್ಷೆಗಳು ದೇಶದ ‘ಗಂಗಾ-ಜಮುನಿ ತೆಹಜೀಬ್’ಗೆ (ಉತ್ತರ ಭಾರತದಲ್ಲಿರುವ ಹಿಂದೂ-ಮುಸ್ಲಿಂ ಸಾಮರಸ್ಯ) ಹಾನಿಯುಂಟು ಮಾಡುತ್ತಿದೆ’ ಎಂದು ಹೇಳಿದರು. ಘಟನೆ ಸಂಬಂಧ ಸಂಭಲ್ ಆಡಳಿತವು ತರಾತುರಿಯಲ್ಲಿ ವರ್ತಿಸಿದೆ ಎಂದು ಆರೋಪಿಸಿದ ಅವರು, ಸಂಬಂಧಿಸಿದ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಮತ್ತು ಅವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು. ‘ಈ ಸರ್ಕಾರವು ಸಂವಿಧಾನವನ್ನು ಗೌರವಿಸುತ್ತಿಲ್ಲ’ ಎಂದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದರು.