Monday, December 23, 2024

ಕರ್ನಾಟಕದಲ್ಲಿ ಹೂಡಿಕೆ ಮಾಡಲು ಬ್ರಿಟನ್​ ಕಂಪನಿಗಳಿಗೆ ಸಂತೋಷ್‌ ಲಾಡ್‌ ಆಹ್ವಾನ !

ಬ್ರಿಟನ್​ : (ನ.30) ಕರ್ನಾಟಕದಲ್ಲಿ ಹೂಡಿಕೆಗೆ ವಿಫುಲವಾದ ಅವಕಾಶಗಳಿದ್ದು, ಹೂಡಿಕೆ ಮಾಡಲು ಮುಂದೆ ಬರುವ ಕಂಪನಿಗಳಿಗೆ ಎಲ್ಲಾ ನೆರವನ್ನು ನಮ್ಮ ಕರ್ನಾಟಕ ಸರ್ಕಾರದಿಂದ ನೀಡಲಾಗುವುದು ಎಂದು ಮಾನ್ಯ ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್‌ ಅವರು ಹೇಳಿದರು.

ಬ್ರಿಟನ್‌ನ ಹೌಸ್‌ ಆಫ್‌ ಲಾರ್ಡ್ಸ್‌ನಲ್ಲಿ ನಡೆದ ಇಂಡೋ -ಯುರೋಪಿಯನ್‌ ಹೂಡಿಕೆ ಸಮ್ಮೇಳನದಲ್ಲಿ ಮುಖ್ಯ ಭಾಷಣಕಾರರಾಗಿ ಸಂತೋಷ್ ಲಾಡ್ ಅವರು ಮಾತನಾಡಿದರು.

ಕರ್ನಾಟಕದಲ್ಲಿ ಹಾಗೂ ಬೆಂಗಳೂರಿನಲ್ಲಿ ಹೂಡಿಕೆ ಮಾಡಲು ಮತ್ತು ಉದ್ಯಮ ವಿಸ್ತರಣೆ ಮಾಡಲು ಸಾಕಷ್ಟು ವಿಫುಲ ಅವಕಾಶಗಳಿವೆ. ಎಲ್ಲಾ ರೀತಿಯಲ್ಲಿ ನಮ್ಮ ರಾಜ್ಯ ಸರ್ಕಾರ ಹೂಡಿಕೆದಾರರಿಗೆ ನೆರವು ಒದಗಿಸಲಿದೆ. ಕೃಷಿ, ಉದ್ದಿಮೆ ಹೀಗೆ ಹಲವು ರಂಗದಲ್ಲಿ ಹೂಡಿಕೆ ಮಾಡಬಹುದು. ಬೆಂಗಳೂರು ಮಾಹಿತಿ ತಂತ್ರಜ್ಞಾನದಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದೆ. ಕರ್ನಾಟಕದ ಜಿಡಿಪಿ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ಹೇಳಿದರು.

ನಮ್ಮ ಕರ್ನಾಟಕವು ಕೇವಲ ಐಟಿ ಮಾತ್ರವಲ್ಲದೆ ಜೈವಿಕ ತಂತ್ರಜ್ಞಾನ (ಬಿಟಿ) ದಲ್ಲೂ ದೊಡ್ಡ ಹೆಸರು ಪಡೆದಿದೆ. ಪಶುಸಂಗೋಪನೆ, ರೇಷ್ಮೆಯಂತಹ ಚಟುವಟಿಕೆಗಳ ವಿಸ್ತರಣೆಗೆ ಅತ್ಯುತ್ತಮ ಅವಕಾಶಗಳಿವೆ. ಏಷ್ಯಾದಲ್ಲೇ ಅತಿದೊಡ್ಡ ಸೋಲಾರ್‌ ಪಾರ್ಕ್‌ ಕರ್ನಾಟಕದಲ್ಲಿದೆ. ಬಹುರಾಷ್ಟ್ರೀಯ ಕಂಪನಿಗಳು, ಐಟಿ ಕಂಪನಿಗಳು ಕರ್ನಾಟಕದಲ್ಲಿ ಶ್ರೇಷ್ಠ ಪ್ರಗತಿ ಸಾಧಿಸಿವೆ ಎಂದು ವಿವರಿಸಿದರು.

ಬ್ರಿಟನ್‌ ಮತ್ತು ಭಾರತದ ನಂಟು ತುಂಬ ಹಳೆಯದು. ಹೂಡಿಕೆಗೆ ಎರಡೂ ಸರ್ಕಾರಗಳು ಕೈ ಜೋಡಿಸಿದರೆ ಬಹಳಷ್ಟು ಪ್ರಯೋಜನವಾಗಲಿವೆ. ಈ ನಿಟ್ಟಿನಲ್ಲಿ ಹೂಡಿಕೆದಾರರು ಕರ್ನಾಟಕದಲ್ಲಿ ಹೂಡಿಕೆಗೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.

ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆ ಕಾರ್ಯಕ್ರಮಗಳ ಬಗ್ಗೆ ಗಮನ ಸೆಳೆದ ಸಚಿವ ಲಾಡ್
ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ಜಾರಿ ಮಾಡಿದ ಪಂಚಗ್ಯಾರಂಟಿಗಳ ಬಗ್ಗೆ ವಿವರಿಸಿದ ಸಚಿವ ಲಾಡ್‌ ಅವರು, ಈ ಕಾರ್ಯಕ್ರಮಗಳನ್ನು ನಮ್ಮ ದೇಶದ ಇತರ ರಾಜ್ಯಗಳಲ್ಲದೇ, ವಿಶ್ವದ ಹಲವು ದೇಶಗಳಿಗೆ ಸಹ ಮಾದರಿಯಾಗಿ ಪರಿಗಣಿಸಿವೆ. ಇದೊಂದು ಅಭೂತಪೂರ್ವವಾದ ಕಾರ್ಯಕ್ರಮ. ಈ ಕಾರ್ಯಕ್ರಮಗಳಿಗೆ ಪ್ರತಿ ವರ್ಷ 12 ಬಿಲಿಯನ್‌ ಡಾಲರ್‌ ಅನ್ನು ಖರ್ಚು ಮಾಡಲಾಗುತ್ತಿದೆ. ಬಡ ಜನರಿಗೆ ಸಾಮಾಜಿಕ ಸೇವಾ ಯೋಜನೆಗಳನ್ನು ನೀಡಲಾಗುತ್ತಿದೆ. ಇದರಿಂದ ನಮ್ಮ ಕರ್ನಾಟಕ ರಾಜ್ಯದ ಜಿಡಿಪಿ ಸಹ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. ಇಂತಹ ಯೋಜನೆಯನ್ನು ಜಾರಿ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಧನ್ಯವಾದಗಳು ಎಂದು ಹೇಳಿದರು.

RELATED ARTICLES

Related Articles

TRENDING ARTICLES