ಮುಂಬೈ : ಮಹಾರಾಷ್ಟ್ರದ ಉಸ್ತುವಾರಿ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಪ್ರಸಕ್ತ ತಮ್ಮ ಸ್ವಕ್ಷೇತ್ರ ಸತಾರಾದಲ್ಲಿರುವ ಏಕನಾಥ ಶಿಂಧೆಯವರು ಕೆಮ್ಮು, ಶೀತ, ಜ್ವರದಿಂದ ಬಳಲುತ್ತಿದ್ದು ಅವರಿಗೆ ವೈದ್ಯರು ಚಿಕಿತ್ಸ್ ನೀಡಿದ್ದಾರೆ.
ಏಕನಾತ್ ಶಿಂದೆಯವರಿಗೆ ವೈರಲ್ ಸೋಂಕು ಉಂಟಾಗಿದ್ದು, ಇದೀಗ ಪರಿಸ್ಥಿತಿ ಸುಧಾರಿಸಿದೆ. ಇನ್ನೂ ಸ್ವಲ್ಪ ಕೆಮ್ಮು ಹಾಗೂ ಶೀತ ಇದೆ ಎಂದು ವೈದ್ಯರು ತಿಳಿಸಿದ್ದಾರೆ. ಇಂದು ಬೆಳಗ್ಗೆ ಏಕನಾಥ ಶಿಂಧೆಯವರು ಮುಂಬೈನಲ್ಲಿ ತಮ್ಮ ಪೂರ್ವ ನಿಯೋಜಿತ ಕಾರ್ಯಕ್ರಮಗಳನ್ನೆಲ್ಲಾ ದಿಢೀರ್ ರದ್ದು ಮಾಡಿ ತಮ್ಮ ಸ್ವಕ್ಷೇತ್ರ ಸತಾರಾಗೆ ತೆರಳಿದರು.
ಅವರ ಸ್ವಗ್ರಾಮದ ನಿವಾಸಕ್ಕೆ ಆಗಮಿಸುವ ವೇಳೆಗಾಗಲೇ ಅವರು ಜ್ವರದಿಂದ ಬಳಲುತ್ತಿದ್ದರು. ಹಾಗಾಗಿ ವೈದ್ಯರನ್ನು ಮನೆಗೆ ಕರೆಸಿ, ಚಿಕಿತ್ಸೆ ಕೊಡಿಸಲಾಗಿತ್ತು. ಶಿಂಧೆಯವರಿಗೆ ವಿಶ್ರಾಂತಿಯ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ. ಪ್ರಸಕ್ತ ಮಹಾರಾಷ್ಟ್ರದಲ್ಲಿ ಮಹಾಯುತಿಯಲ್ಲಿ ಮುಖ್ಯಮಂತ್ರಿ ಆಯ್ಕೆ ಸಂಬಂಧ ಬಿರುಸಿನ ಚಟುವಟಿಕೆಗಳು ನಡೆಯುತ್ತಿದ್ದು, ಇದರಲ್ಲಿ ಮಹತ್ವದ ಪಾತ್ರ ವಹಿಸಿರುವ ಏಕನಾಥ ಶಿಂಧೆ ದಿಢೀರ್ ಆಗಿ ಅನಾರೋಗ್ಯಕ್ಕೆ ಒಳಗಾಗಿ ಸ್ವ ಕ್ಷೇತ್ರಕ್ಕೆ ತೆರಳಿರುವುದು ರಾಜಕೀಯ ವಲಯದಲ್ಲಿ ಆತಂಕಕ್ಕೆ ಕಾರಣವಾಗಿದೆ.