ಹಾಸನ : ಜಿಲ್ಲೆಯ ಜನತೆ ಒಬ್ಬ ಸಾಧಾರಣ ರೈತ ಕುಟುಂಬದ ಮಗನಾಗಿ ಜನಿಸಿರುವ ದೇವೇಗೌಡರನ್ನ ಕೆಂಪುಕೋಟೆ ಮೇಲೆ ಬಾವುಟ ಹಾರಿಸುವ ಶಕ್ತಿಯನ್ನು ತುಂಬಿ ಇತಿಹಾಸ ಸೃಷ್ಟಿ ಮಾಡಿದ್ದಾರೆ ಎಂದು ಜೆಡಿಎಸ್ ಯುವಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಹೇಳಿದರು.
ಜಿಲ್ಲೆ ಅರಕಲಗೂಡಿನಲ್ಲಿ ನಡೆದ ಮಾಜಿ ಸಚಿವ ಎ.ಮಂಜು ಅವರ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿಂದು ಮಾತಾಡಿದ ಅವರು, ನಿಮ್ಮ ಹೃದಯದಲ್ಲಿ ನಮ್ಮ ಕುಟುಂಬದ ಮೇಲೆ ಇಟ್ಟಿರುವ ಪ್ರೀತಿ, ಗೌರವ ಎಷ್ಟು ಜನ್ಮ ಎತ್ತಿ ಬಂದರು ತೀರಿಸಲು ಸಾಧ್ಯವಿಲ್ಲ. ನಿಮ್ಮ ಋಣಕ್ಕಾಗಿ ಪ್ರಾಮಾಣಿಕವಾಗಿ ನಮ್ಮ ಇಡೀ ಪಕ್ಷ, ನಮ್ಮ ಕುಟುಂಬ ನಿಮ್ಮ ಜೊತೆಯಲ್ಲಿ ಸದಾಕಾಲ ಇರುತ್ತೇವೆ ಎಂದರು.
ಇನ್ನು ರಾಮನಗರ ಜಿಲ್ಲೆ ಕೂಡ ನಮ್ಮ ಕುಟುಂಬಕ್ಕೆ ಎಂಟು ಬಾರಿ ಶಾಸಕ ಸ್ಥಾನ ಕೊಟ್ಟಿರುವ ಜಿಲ್ಲೆ. ಮೂರು ಬಾರಿ ಸಂಸದರಾಗಿ ಕುಮಾರಣ್ಣ ಅವರನ್ನು ಆಯ್ಕೆ ಮಾಡಿದ್ದಾರೆ. ಚುನಾವಣೆಯಲ್ಲಿ ಏಳು ಬೀಳು ಸರ್ವೆ ಸಾಮಾನ್ಯ. ನಾನು ರಾಜಕಾರಣದ ಹಿನ್ನೆಲೆಯಲ್ಲಿ ಬಂದಿರುವ ವ್ಯಕ್ತಿಯಾಗಿದ್ದರು ಚಿತ್ರರಂಗದಲ್ಲಿ ನನ್ನದೇ ಆದಷ್ಟು ಸವಾಲುಗಳನ್ನು ಸ್ವೀಕಾರ ಮಾಡಿದೆ. ಜಾಗ್ವಾರ್ ಮೂಲಕ ನಮ್ಮ ತಂದೆ ಪರಿಚಯಿಸಿದರು. ಆ ರೀತಿ ಅನೇಕ ಚಿತ್ರಗಳನ್ನು ಮಾಡಿದೆ. ತದನಂತರ ಸಾರ್ವಜನಿಕ ಬದುಕಿನಲ್ಲಿ ಜವಾಬ್ದಾರಿಗಳನ್ನು ಅರಿತಿದ್ದೇನೆ. ಆ ಒಂದು ಕಾರಣದಿಂದ ಸಂಪೂರ್ಣವಾಗಿ ಸಾರ್ವಜನಿಕ ಬದುಕಿಗೆ ಧುಮುಕಿದ್ದೇನೆ ಎಂದು ತಮ್ಮ ರಾಜಕೀಯ ಜೀವನದ ಬಗ್ಗೆ ಮಾತಾಡಿದರು.
ಅಷ್ಟೆ ಅಲ್ಲದೇ, ನಮ್ಮ ನಾಡಿನ ನೆಲ, ಜಲ, ಭಾಷೆಯ ವಿಚಾರವಾಗಿ ದೇವೇಗೌಡರು 92 ವಯಸ್ಸಾದರೂ ರಾಜ್ಯಸಭೆಯಲ್ಲಿ ಏಕಾಂಗಿಯಾಗಿ ನೆಲ, ಜಲ, ಭಾಷೆ ಉಳಿಸುವ ಕೆಲಸ ಮಾಡುತ್ತಿದ್ದಾರೆ. ನನ್ನ ಜೀವನದ ಸ್ಪೂರ್ತಿ ದೇವೇಗೌಡರು. ನನ್ನ ಜವಾಬ್ದಾರಿಯನ್ನ ಅರಿತಿದ್ದೇನೆ. ಅನಿರೀಕ್ಷಿತವಾದ ಬೆಳವಣಿಗೆ ಉಪಚುನಾವಣೆಯಲ್ಲಿ ಸ್ಪರ್ಧಿಸಬೇಕಾಗಿ ಬಂತು.ಈ ಚುನಾವಣೆಯ ಸೋಲಿನ ಬಗ್ಗೆ ಹೆಚ್ಚಾಗಿ ಪರಾಮರ್ಶೆ ಮಾಡಲ್ಲ. ಕರ್ನಾಟಕ ರಾಜ್ಯದಲ್ಲಿ ಕಟ್ಟಿರುವ ರೈತ ಪರವಾದ ಪಕ್ಷ, ಪ್ರಾದೇಶಿಕ ಪಕ್ಷ ಜೆಡಿಎಸ್. ಲಕ್ಷಾಂತರ ಕಾರ್ಯಕರ್ತರ ದುಡಿಮೆ, ಎಲ್ಲಾ ತಂದೆ, ತಾಯಿಯರ ಆಶೀರ್ವಾದ, ರೈತರ ಆಶೀರ್ವಾದ ಮಾಡಿ ಇಲ್ಲಿಯವರೆಗೆ ಬೆಳೆಸಿ, ಉಳಿಸಿದ್ದೀರಿ ಎಂದಿದ್ದಾರೆ.
ಇನ್ನು ನಾನು ಸಂಸದನಾಗಲು, ಶಾಸಕನಾಗಲು ಎಂದು ಕೂಡ ಹಪಹಪಿಸಿಲ್ಲ. ಹಾಗಿದ್ದರೆ, ನಾನು ಚಿತ್ರರಂಗಕ್ಕೆ ಹೋಗುತ್ತಿರಲಿಲ್ಲ, ರಾಜಕಾರಣಕ್ಕೆ ಬರುತ್ತಿದ್ದೆ. ಹಲವಾರು ಸಂದರ್ಭದಲ್ಲಿ ಅಖಾಡ ಸಿದ್ದವಾಗಿತ್ತು, ಬಹಳ ಸುಲಭವಾಗಿ ಶಾಸಕನಾಗಬಹುದಿತ್ತು. ಆದರೆ, ಇಲ್ಲಿಯವರೆಗೂ ನಾನು ನಮ್ಮ ಪಕ್ಷ ಸಂಕಷ್ಟದಲ್ಲಿತ್ತು, ಆ ಸಂದರ್ಭದಲ್ಲಿ ಒಬ್ಬ ಪಕ್ಷದ ಶಿಸ್ತಿನ ಸಿಪಾಯಿಯಾಗಿ, ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷದ ಕಾರ್ಯಕರ್ತರ ಭಾವನೆಗಳಿಗೆ ಸ್ಪಂದಿಸುವ ಕೆಲಸ ಮಾಡಿದ್ದೇನೆ ಎಂದು ಹೇಳಿದರು.
ಸದ್ಯ 19 ಸ್ಥಾನ ಗೆದ್ದು 18ಕ್ಕೆ ಇಳಿದಿದ್ದೇವೆ. ನಿಮ್ಮಲ್ಲೆರ ಆಶೀರ್ವಾದಿಂದ ಇಡೀ ರಾಜ್ಯ ಪ್ರವಾಸ ಮಾಡುತ್ತೇನೆ. ಮೂಲೇಲಿ ಕೂರುವ ಜಾಯಮಾನ ನನ್ನದಲ್ಲ. ನಾನು ಸೋತು ಒಂದು ವಾರ ಆಗಿದೆ. ನೀವು ಎಂದೆಗುಂದಬಾರದು ಎಂದು ಅನೇಕರು ಹೇಳಿದರು. ನನಗಿನ್ನು ವಯಸ್ಸು 36 ವರ್ಷ. ನನ್ನ ಮುಂದೆ ಇರುವುದು ಒಂದೇ ಸವಾಲು. ಜನತಾದಳ ಪಕ್ಷವನ್ನು ದಡ ಮುಟ್ಟಿಸಬೇಕು. ನಾನು ಶಾಸಕನಾಗಬೇಕು ಎನ್ನುವುದು ನನ್ನ ಮುಂದೆ ಇರುವ ಪ್ರಶ್ನೆ ಅಲ್ಲ. ಪ್ರಾದೇಶಿಕ ಪಕ್ಷ ಉಳಿಯಬೇಕಿದೆ, ಕನ್ನಡಿಗರ ಅಸ್ಮಿತೆಗಾಗಿ ಈ ಪಕ್ಷ ಉಳಿಯಬೇಕಿದೆ. ಆ ಹಿನ್ನೆಲೆಯಲ್ಲಿ ಹೋರಾಟ ಮಾಡುತ್ತೇನೆ. ಕೊನೆ ಉಸಿರು ಇರುವವರೆಗೂ ಹೋರಾಡುತ್ತೇನೆ. ಮಾತನಾಡಲು ವೇದಿಕೆಗಳು ಮುಂದಿನ ದಿನಗಳಲ್ಲಿ ಸಜ್ಜಾಗುತ್ತೆ. ಹೋರಾಟ ಎನ್ನುವುದನ್ನು ರಕ್ತಗತವಾಗಿ ಮೈಗೂಡಿಸಿಕೊಂಡಿದ್ದೇನೆ. ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಒಬ್ಬ ಯುವಕನಾಗಿ, ಪ್ರಾಮಾಣಿಕವಾಗಿ ನಿಮ್ಮ ಜೊತೆಯಲ್ಲಿ ಇರುತ್ತೇನೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಮಾತಾಡಿದರು.