Friday, January 10, 2025

ಅಪ್ಪನ ಹತ್ಯೆಯ ದ್ವೇಶಕ್ಕೆ 13 ವರ್ಷ ಕಾದು ಕುಳಿತು ಪ್ರತೀಕಾರ ತೆಗೆದುಕೊಂಡ ಮಗ

ಹಾಸನ : ಹಾವಿನ ದ್ವೇಶ ಹನ್ನೆರಡು ವರುಷ ಎಂಬ ಗಾದೆಯನ್ನು ನಾವು ಸಾಮಾನ್ಯವಾಗಿ ಕೇಳಿದ್ದೇವೆ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ತಂದೆಯನ್ನು ಕೊಲೆ ಮಾಡಿದವನನ್ನು ಮುಗಿಸಲು 13 ವರ್ಷ ಕಾದು ಕುಳಿತ ಘಟನೆ ಹಾಸನದ, ಅರಕೂಲಗೂಡು ತಾಲ್ಲೂಕಿನ ದಡದಹಳ್ಳಿ ಗ್ರಾಮದಲ್ಲಿ ನಡೆದಿದೆ.

2011ರಲ್ಲಿ ತನ್ನ ಸ್ವಂತ ತಮ್ಮನ ಮೇಲೆ ಕೊಲೆ ಆರೋಪ ಹೊರಿಸುವ ಉದ್ದೇಶದಿಂದ ನಿರ್ವಾಣಪ್ಪ ಎಂಬ ವ್ಯಕ್ತಿ ಗ್ರಾಮದ ಲಕ್ಕಪ್ಪ ಎಂಬ ವ್ಯಕ್ತಿಯನ್ನು ಕೊಲೆ ಮಾಡಿ ಶವವನ್ನು ಸಹೋದರನ ಕಾಂಪೌಂಡ್​​ ಒಳಗೆ ಹಾಕಿದ್ದನು. ಆದರೆ ಪೋಲಿಸ್​ ತನಿಖೆಯಲ್ಲಿ ಕೊಲೆ ಮಾಡಿದ್ದು ನಿರ್ವಾಣಪ್ಪನೆ ಎಂಬುದು ಸಾಭೀತಾಗಿತ್ತು. ಕೊಲೆಯಾದ ಲಕ್ಕಪ್ಪನ ಮಕ್ಕಳು ದಡದಹಳ್ಳಿ ಗ್ರಾಮದಲ್ಲೆ ವಾಸವಾಗಿದ್ದರು.

ಕೊಲೆ ಆರೋಪದ ಮೇಲೆ ಜೈಲು ಸೇರಿದ್ದ ನಿರ್ವಾಣಪ್ಪನಿಗೆ ಒಟ್ಟು 7 ವರ್ಷಗಳ ಶಿಕ್ಷೆಯನ್ನು ನ್ಯಾಯಾಲಯ ವಿಧಿಸಿತ್ತು. ಶಿಕ್ಷೆಯನ್ನು ಅನುಭವಿಸಿ ಇತ್ತೀಚೆಗೆ ಜೈಲಿನಿಂದ ಬಿಡುಗಡೆಯಾಗಿದ್ದನು ಆದರೆ ಗ್ರಾಮಕ್ಕೆ ಬರಲು ಹೆದರಿದ್ದ ನಿರ್ವಾಣಪ್ಪ ಮಲ್ಲಿಪಟ್ಟಣದಲ್ಲಿ ವಾಸವಾಗಿದ್ದನು. ಆದರೆ ನೆನ್ನೆ ಮಧ್ಯಾಹ್ನ ತನ್ನ ತಂದೆಯ ಮರಣ ಪತ್ರವನ್ನು ತೆಗೆದುಕೊಳ್ಳಲು ದಡದಹಳ್ಳಿಯ ಅಂಗನವಾಡಿ ಕೇಂದ್ರಕ್ಕೆ ಬಂದಿದ್ದ ನಿವಾರ್ಣಪ್ಪನನ್ನು ನೋಡಿ ಕೆರಳಿದ ಲಕ್ಕಪ್ಪನ ಮಗ ಮೂರ್ತಿ ಅಲಿಯಾಸ್​ ಗುಂಡ ಕೆರಳಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.

ಹಾಡ ಹಗಲೆಯೆ  ಗ್ರಾಮದ ನಡುರಸ್ತೆಯಲ್ಲಿ ನಿರ್ವಾಣಪ್ಪನನ್ನು ಕೊಚ್ಚಿ ಕೊಲೆ ಮಾಡಿದ್ದು. ಈ ದೃಶ್ಯ ಕಂಡ ಗ್ರಾಮಸ್ಥರು ದಂಗಾಗಿದ್ದಾರೆ. ಕೊಲೆಯಾದ ಸ್ಥಳಕ್ಕೆ ಹಾಸನ ಎಸ್​ಪಿ. ಮೊಹಮದ್​ ಸುಜೀತಾ, ಎಎಸ್‌ಪಿ. ಶಾಲೂ, ಅರಕಲಗೂಡು ಸಿಪಿಐ ಕೆ.ಎಂ.ವಸಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆಯಾದ ಕೆಲವೆ ಗಂಟೆಗಳಲ್ಲಿ ಕಾರ್ಯಪ್ರವೃತ್ತರಾದ ಪೋಲಿಸರು ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಮಾಹಿತಿ ದೊರೆತಿದೆ.

RELATED ARTICLES

Related Articles

TRENDING ARTICLES