ದೆಹಲಿ : ಡೋಪಿಂಗ್ ವಿಚಾರವಾಗಿ ಒಲಿಂಪಿಯನ್ ಕುಸ್ತಿಪಟು 30 ವರ್ಷದ ಬಜರಂಗ್ ಪೂನಿಯಾ ಅವರನ್ನು ನಾಲ್ಕು ವರ್ಷ ಅಮಾನತು ಮಾಡಿ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ (NADA) ಕ್ರಮ ಕೈಗೊಂಡಿದೆ. ನಾಡಾದ ಈ ಆದೇಶದ ಪ್ರಕಾರ ಪೂನಿಯಾ ಅವರು ಇನ್ನು ನಾಲ್ಕು ವರ್ಷ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಕುಸ್ತಿ ಆಡುವಂತಿಲ್ಲ.
ಹರಿಯಾಣದ ಸೋನೆಪತ್‌ನಲ್ಲಿ ಇದೇ ವರ್ಷ ಮಾರ್ಚ್ 10ರಂದು ನಡೆದ ಕುಸ್ತಿ ಆಯ್ಕೆ ಟ್ರಯಲ್ಸ್‌ನಲ್ಲಿ ನಿಷೇಧಿತ ಉದ್ದೀಪನ ಮದ್ದು ಪರೀಕ್ಷೆಗಾಗಿ ಮೂತ್ರದ ಮಾದರಿ ನೀಡಲು ನಿರಾಕರಿಸಿದ್ದಕ್ಕಾಗಿ ಪೂನಿಯಾ ಅವರನ್ನು ಏಪ್ರಿಲ್ 23ರಂದು ನಾಡಾ ತಾತ್ಕಾಲಿಕವಾಗಿ ಅಮಾನತುಗೊಳಿಸಿತ್ತು. ಅದನ್ನು ಸಂಯುಕ್ತ ವಿಶ್ವ ಕುಸ್ತಿ (UWW) ಸಂಸ್ಥೆಯೂ ಅಂಗೀಕರಿಸಿತ್ತು.
ಈ ಅಮಾನತು ಕ್ರಮವನ್ನು ಪ್ರಶ್ನಿಸಿ ಪೂನಿಯಾ ನಾಡಾಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ಕಳೆದ ಸೆಪ್ಟೆಂಬರ್ 20 ಹಾಗೂ ಅಕ್ಟೋಬರ್ 4 ರಂದು ಅಂತಿಮ ವಿಚಾರಣೆ ನಡೆಸಿ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ ನಿನ್ನೆ (ನ.26) ಪೂನಿಯಾ ಅವರನ್ನು ನಾಲ್ಕು ವರ್ಷ ಕುಸ್ತಿಯಿಂದ ಅಮಾನತು ಮಾಡಿ ಕ್ರಮ ಕೈಗೊಂಡಿದೆ.
ನಾಡಾದ ಕಲಂ 10.3.1 ರ ಅಡಿಯಲ್ಲಿನ ನಿರ್ಬಂಧಗಳಿಗೆ ಅಥ್ಲೇಟ್ ಬಜರಂಗ್ ಪೂನಿಯಾ ಅವರು ಹೊಣೆಗಾರ. ಇದರಿಂದ ಅವರು 4 ವರ್ಷಗಳ ಅವಧಿಯ ಅನರ್ಹತೆಗೆ ಗುರಿಯಾಗುತ್ತಾರೆ. ಈ ಅನರ್ಹತೆ ಈ ವರ್ಷ ಏಪ್ರಿಲ್ 23ರಿಂದಲೇ ಅನ್ವಯವಾಗುತ್ತದೆ ಎಂದು ನಾಡಾ ತಿಳಿಸಿದೆ. ಇತ್ತೀಚೆಗೆ ಕಾಂಗ್ರೆಸ್ ಪಕ್ಷವನ್ನು ಸೇರಿರುವ ಪೂನಿಯಾ ಅವರು ಸದ್ಯ ಆ ಪಕ್ಷದ ರೈತ ಘಟಕದ ಕಾರ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.