ಚೆನೈ: ತಮ್ಮ ವಿರುದ್ಧ ಬಹಿರಂಗ ಪತ್ರ ಬರೆದಿದ್ದ ನಟಿ ನಯನತಾರಾ ವಿರುದ್ಧ ಧನುಷ್ ಕಾನೂನತ್ಮಕವಾಗಿ ಹೋರಾಟ ಮಾಡಲು ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ ಕೋರ್ಟಿನಲ್ಲಿ ದೂರು ದಾಖಲಿಸಿದ್ದಾರೆ. ನಟಿ ನಯನತಾರಾ ಮತ್ತು ಆಕೆಯ ಪತಿ ವಿಘ್ನೇಶ್ ಶಿವನ್ ಮತ್ತು ದಂಪತಿಯ ರೌಡಿ ಪಿಕ್ಚರ್ಸ್ ಪ್ರೈವೇಟ್ ಲಿಮಿಟೆಡ್, ಇತರ ಇಬ್ಬರ ವಿರುದ್ಧ ಮದ್ರಾಸ್ ಹೈಕೋರ್ಟ್‌ನಲ್ಲಿ ಸಿವಿಲ್ ಮೊಕದ್ದಮೆ ಹೂಡಿದ್ದಾರೆ. ಆ ಮೂಲಕ ತಮ್ಮ ವಿರುದ್ಧ ಬಹಿರಂಗವಾಗಿ ಪತ್ರ ಬರೆದು ಅಸಮಾಧಾನ ವ್ಯಕ್ತಪಡಿಸಿದ್ದ ನಯನತಾರಾ ಮೇಲೆ ಕಾನೂನಿನ ಅಸ್ತ್ರವನ್ನು ಧನುಷ್ ಬಳಸಿದ್ದಾರೆ.
ಇತ್ತೀಚೆಗೆ ನೆಟ್ ಫಿಕ್ಸ್‌ನಲ್ಲಿ ನಯನತಾರ ಜೀವನದ ಬಗ್ಗೆ ‘ನಯನತಾರ:ಬಿಯಾಂಡ್ ದಿ ಫೇರಿಟೇಲ್’ ಡಾಕ್ಯುಮೆಂಟರಿ ಸ್ಟ್ರೀಮ್ ಆಗಿದೆ. ಇದರಲ್ಲಿ ಧನುಷ್ ನಿರ್ಮಾಣದ ‘ನಾನುಂ ರೌಡಿ ಧನ್’ ಸಿನಿಮಾದ ದೃಶ್ಯವನ್ನು ಬಳಸಲು ನಯನತಾರ ಅನುಮತಿಯನ್ನು ಕೇಳಿದ್ದರು. ಆದರೆ ಧನುಷ್ ಅನುಮತಿಯನ್ನು ನೀಡಿರಲಿಲ್ಲ. ಹಾಗಾಗಿ ನಯನತಾರ ಸಾಕ್ಷ್ಯ ಚಿತ್ರದ ತಂಡದವರು ‘ನಾನುಂ ರೌಡಿ ಧನ್’ ಚಿತ್ರದ ತೆರೆಮರೆಯ ದೃಶ್ಯಗಳನ್ನು ಸಾಕ್ಷ್ಯಚಿತ್ರದ ಟ್ರೇಲರ್‌ನಲ್ಲಿ ಬಳಸಿಕೊಂಡಿದ್ದರು. ಈ ವಿಚಾರ ಅರಿತ ಧನುಷ್ ತಮ್ಮ ಅನುಮತಿಯಿಲ್ಲದೆ ದೃಶ್ಯವನ್ನು ಬಳಸಲಾಗಿದೆ ಎಂದು ಕಾಪಿ ರೈಟ್ಸ್ ನೋಟಿಸ್ ಕಳುಹಿಸಿ 10 ಕೋಟಿ ರೂ. ಬೇಡಿಕೆಯನ್ನಿಟ್ಟಿದ್ದರು.
ಈ ಬಗ್ಗೆ ನಯನತಾರ ಸೋಶಿಯಲ್ ಮೀಡಿಯಾದಲ್ಲಿ ಧನುಷ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಸುದೀರ್ಘ ಪತ್ರವೊಂದನ್ನು ಪೋಸ್ಟ್ ಮಾಡಿದ್ದರು. ಇದೀಗ ಧನುಷ್ ನಯನತಾರಾ ಹಾಗೂ ಪತಿ ವಿಘ್ನೇಶ್ ಶಿವನ್ ವಿರುದ್ಧ ಧನುಷ್ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಧನುಷ್ ಪರ ವಕೀಲರು ಭಾರತದಲ್ಲಿ ಲಾಸ್ ಗಟೋಸ್ ಪ್ರೊಡಕ್ಷನ್ ಸರ್ವಿಸಸ್ ಇಂಡಿಯಾ ಹೆಸರಿನಲ್ಲಿ ಗುರುತಿಸಿಕೊಂಡಿರುವ ನೆಟ್‌ಫಿಕ್ಸ್ ಸಂಸ್ಥೆಯ ವಿರುದ್ಧ ಮೊಕದ್ದಮೆ ಹೂಡುವುದಕ್ಕೆ ಅನುಮತಿಯನ್ನು ಕೇಳಿದ್ದಾರೆ. ಸದ್ಯ ಕೋರ್ಟ್ ಇದಕ್ಕೆ ಅನುಮತಿ ನೀಡಿದೆ .