ಮಂಗಳೂರು: ಮಂಗಳೂರಿನಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಬಿಕೆ ಹರಿಪ್ರಸಾದ್ ಸುದ್ದಿಗೋಷ್ಟಿ ನಡೆಸಿದ್ದು ಬಿಜೆಪಿ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಮಹರಾಷ್ಟ್ರ ಚುನಾವಣೆಯಲ್ಲಿ ಚುನಾವಣಾ ಆಯೋಗವೆ ಬಿಜೆಪಿಗೆ ಸಹಾಯ ಮಾಡಿದ್ದು ಇದರಿಂದಾಗಿ ಬಿಜೆಪಿ ಗೆಲುವು ಸಾಧಿಸಿದೆ ಎಂದು ಹೇಳಿದರು.
‘ಬಿಜೆಪಿಯವರು ಸುಳ್ಳು ವದಂತಿ ಮೂಲಕ ಕಾಂಗ್ರೆಸ್ ಪಕ್ಷದ ವರ್ಚಸ್ಸು ಕುಗ್ಗಿಸುವ ಯತ್ನ ಮಾಡಿದರು.ಆದರೆ
ರಾಜ್ಯದ ಜನತೆ ಬಿಜೆಪಿಯವರ ಅಪ್ರಚಾರಕ್ಕೆ ಸೊಪ್ಪು ಹಾಕಲಿಲ್ಲ. ಇದಕ್ಕೆ ರಾಜ್ಯದ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೇವೆ. ದೇಶದಲ್ಲಿ ಮತದಾರರಿಂದ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ, ಜಾರ್ಖಂಡ್ ನಲ್ಲಿ ಇಂಡಿಯಾ ಒಕ್ಕೂಟಕ್ಕೆ ಜನ ಮತ ನೀಡಿದ್ದಾರೆ. ಜಾತಿಗಣತಿ, ಕಡೆಗಣಿತ ಸಮುದಾಯಕ್ಕೆ ಮೀಸಲಾತಿ ನೀಡುವ ಪ್ರಸ್ತಾಪಕ್ಕೆ ಒತ್ತು ಕೊಟ್ಟಿದ್ದಾರೆ. ಕಾಂಗ್ರೆಸ್ 75 ಶೇ. ಮೀಸಲು ಘೋಷಣೆಗೆ ಜನ ಬೆಂಬಲ ಸಿಕ್ಕಿದೆ. ಬಿಜೆಪಿಯವರು ಗುಡ್ಡಗಾಡು ಜನರಿರುವ ಜಾಗದಲ್ಲಿ ನುಸುಳುಕೋರರ ಬಗ್ಗೆ ಗೊಂದಲ ಎಬ್ಬಿಸಿದ್ದರು . ವಿದೇಶಿ ಗಡಿಭಾಗ ಅಲ್ಲದ ಜಾರ್ಖಂಡ್ ನಲ್ಲಿ ವಲಸೆ ಬಗ್ಗೆ ಅಪಪ್ರಚಾರ ಮಾಡಿದರು. ಆದರೆ ಜಾರ್ಖಂಡ್ ಜನತೆ ಕಮ್ಯುನಿಸ್ಟ್, ಆರ್ ಜೆಡಿ, ಕಾಂಗ್ರೆಸ್ ಪರವಾಗಿ ಮತ ಕೊಟ್ಟಿದ್ದಾರೆ’ ಎಂದು ಹೇಳಿದರು.
ಮಹರಾಷ್ಟ್ರ ಚುನಾವಣೆ ಬಗ್ಗೆ ಹರಿಪ್ರಸಾದ್ ಮಾತು!
ಮಹರಾಷ್ಟ್ರ ಚುನಾವಣೆ ಬಗ್ಗೆ ಮಾತನಾಡಿದ ಹರಿಪ್ರಸಾದ್ ‘ಮಹಾರಾಷ್ಟ್ರದಲ್ಲಿ ಬಿಜೆಪಿಯವರು ಟ್ಯಾಂಕರಿನಲ್ಲಿ ಹಣ ತಂದು ಚುನಾವಣೆ ಗೆದ್ದಿದ್ದಾರೆ. ಅದರಿಂದಾಗಿ ನಮಗೆ ಸೋಲಾಗಿದೆ. ದಲಿತರು, ಮರಾಠರು, ಅಲ್ಪಸಂಖ್ಯಾತರು ಹೆಚ್ಚಿರುವಲ್ಲಿ ಬಿಜೆಪಿ ಗೆದ್ದಿದ್ದು ಸಂಶಯ ಬಂದಿದೆ. ಅಲ್ಪಸಂಖ್ಯಾತರು, ದಲಿತರಲ್ಲಿ 90 ಶೇ. ಮಂದಿ ಬಿಜೆಪಿಗೆ ಮತ ಹಾಕಲ್ಲ. ಅಂತಹ ಕ್ಷೇತ್ರದಲ್ಲಿ ಕೊನೆ ಕ್ಷಣದಲ್ಲಿ ಓಟಿಂಗ್ ಪರ್ಸೆಂಟ್ ಹೆಚ್ಚಿದ್ದು ಶಂಕೆಗೀಡಾಗಿದೆ.ಮಹಾರಾಷ್ಟ್ರದಲ್ಲಿ ಚುನಾವಣೆ ಆಯೋಗವೇ ಬಿಜೆಪಿ ಪರವಾಗಿತ್ತು. ಅಂಪೈರ್ ವನ್ ಸೈಡ್ ಮಾಡಿದ ಮೇಲೆ ಮ್ಯಾಚ್ ಗೆಲ್ಲದಿರುತ್ತಾ ? ಕರ್ನಾಟಕದಲ್ಲಿಯೂ ದುಡ್ಡು ಹಾಕಿದ್ದಾರೆ, ಜನ ಮಾತ್ರ ಕಾಂಗ್ರೆಸನ್ನು ಆಯ್ಕೆ ಮಾಡಿದ್ದಾರೆ’ ಎಂದು ಹೇಳಿದರು.