ಪರ್ತ್: (ಬಾರ್ಡರ್ನ ಗವಾಸ್ಕರ್ ಟ್ರೋಫಿ) ನಾಯಕ ಜಸ್ಪ್ರೀತ್ ಬುಮ್ರಾ 5 ವಿಕೆಟ್ ಗೊಂಚಲು ಪಡೆಯುವ ಮೂಲಕ ಪರ್ತ್ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ 46 ರನ್ ಅಂತರದ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಆಸ್ಟ್ರೇಲಿಯಾ ತಂಡವು ಕೇವಲ 104 ರನ್‌ಗಳಿಗೆ ಮೊದಲ ಇನ್ನಿಂಗ್ಸ್ ಸರ್ವಪತನ ಕಂಡಿದೆ. ಬುಮ್ರಾ 5 ವಿಕೆಟ್ ಪಡೆದರೆ, ಹರ್ಷಿತ್ ರಾಣಾ 3 ಹಾಗೂ ಮೊಹಮ್ಮದ್ ಸಿರಾಜ್ 2 ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರು.
ಇಲ್ಲಿನ ಪರ್ತ್ ಕ್ರಿಕೆಟ್ ಸ್ಟೆಡಿಯಂನಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾವನ್ನು ಕೇವಲ 150 ರನ್‌ಗಳಿಗೆ ಕಟ್ಟಿಹಾಕಿ ಮೊದಲ ಇನ್ನಿಂಗ್ಸ್ ಆರಂಭಿಸಿದ್ದ ಆತಿಥೇಯ ಆಸ್ಟ್ರೇಲಿಯಾ ತಂಡವು ಮೊದಲ ದಿನದಾಟದಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು ಕೇವಲ 67 ರನ್ ಗಳಿಸಲಷ್ಟೇ ಶಕ್ತವಾಯಿತು. ಟೀಂ ಇಂಡಿಯಾ ಎರಡನೇ ದಿನದಾಟದಲ್ಲಿ ಕಾಂಗರೂ ಪಡೆಯನ್ನು ನೂರು ರನ್‌ಗಳೊಂದಿಗೆ ಕಟ್ಟಿಹಾಕುವ ಲೆಕ್ಕಾಚಾರದೊಂದಿಗೆ ಕಣಕ್ಕಿಳಿಯಿತು.
ಬುಮ್ರಾ ತಾವೆಸೆದ ಮೊದಲ ಎಸೆತದಲ್ಲೇ ಅಲೆಕ್ಸ್ ಕ್ಯಾರಿಯನ್ನು ಬಲಿ ಪಡೆಯುವಲ್ಲಿ ಯಶಸ್ವಿಯಾದರು. ಕ್ಯಾರಿ 21 ರನ್ ಗಳಿಸಿ ವಿಕೆಟ್ ಕೀಪರ್ ರಿಷಭ್ ಪಂತ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಇದರ ಬೆನ್ನಲ್ಲೇ ನೇಥನ್ ಲಯನ್ 5 ರನ್ ಗಳಿಸಿ ಹರ್ಷಿತ್ ರಾಣಾಗೆ ವಿಕೆಟ್ ಒಪ್ಪಿಸಿದರು. ಇನ್ನು ಕೊನೆಯಲ್ಲಿ ಮಿಚೆಲ್ ಸ್ಟಾರ್ಕ್ 112 ಎಸೆತಗಳನ್ನು ಎದುರಿಸಿ 26 ರನ್ ಗಳಿಸಿ ಕೊನೆಯವರಾಗಿ ವಿಕೆಟ್ ಒಪ್ಪಿಸಿದರು. ಪರ್ತ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಸ್ಟಾರ್ಕ್ ಗಳಿಸಿದ 26 ರನ್ ಆಸೀಸ್ ಪರ ದಾಖಲಾದ ವೈಯುಕ್ತಿಕ ಗರಿಷ್ಠ ಸ್ಕೋರ್ ಎನಿಸಿಕೊಂಡಿತು.