Friday, November 22, 2024

ಆಸ್ಟ್ರೇಲಿಯಾದಲ್ಲೂ ಕಳೆಪೆ ಫಾರ್ಮ್​ ಮುಂದುವರಿಸಿದ ಭಾರತದ ಬ್ಯಾಟರ್​ಗಳು

ಪರ್ತ್‌: ಅನಿರೀಕ್ಷಿತ ಪುಟಿತ ಕಾಣುತ್ತಿರುವ ಪರ್ತ್ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಬ್ಯಾಟರ್‌ಗಳು ರನ್ ಗಳಿಸಲು ಮತ್ತೊಮ್ಮೆ ಪರದಾಟ ನಡೆಸಿದ್ದಾರೆ. ಬಾರ್ಡರ್‌-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 150 ರನ್‌ಗಳಿಗೆ ಸರ್ವಪತನ ಕಂಡಿದೆ. ಜೋಶ್ ಹೇಜಲ್‌ವುಡ್ 4 ವಿಕೆಟ್ ಕಬಳಿಸಿದರೆ, ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್ ಹಾಗೂ ಮಿಚೆಲ್ ಮಾರ್ಷ್ ತಲಾ 2 ವಿಕೆಟ್ ಹಂಚಿಕೊಂಡಿದ್ದಾರೆ.

ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಜಸ್ಪ್ರೀತ್ ಬುಮ್ರಾ ಮೊದಲು ಬ್ಯಾಟ್ ಮಾಡುವ ತೀರ್ಮಾನ ತೆಗೆದುಕೊಂಡರು. ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಖಾತೆ ತೆರೆಯುವ ಮುನ್ನವೇ ಮಿಚೆಲ್‌ ಸ್ಟಾರ್ಕ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ಶುಭ್‌ಮನ್ ಗಿಲ್ ಅನುಪಸ್ಥಿತಿಯಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದ ದೇವದತ್ ಪಡಿಕ್ಕಲ್ ಕೂಡಾ ಶೂನ್ಯ ಸುತ್ತಿ ಹೇಜಲ್‌ವುಡ್‌ಗೆ ವಿಕೆಟ್ ಒಪ್ಪಿಸಿದರು. ತಂಡದ ಅನುಭವಿ ಬ್ಯಾಟರ್ ವಿರಾಟ್ ಕೊಹ್ಲಿ ಮೇಲಿಟ್ಟ ನಿರೀಕ್ಷೆ ಮತ್ತೊಮ್ಮೆ ಹುಸಿಯಾಯಿತು. ಹೇಜಲ್‌ವುಡ್ ಅವರು ಎಸೆದ ಚೆಂಡು ಹೆಚ್ಚುವರಿ ಪುಟಿತ ಕಂಡಿತು. ಕೊಹ್ಲಿ ಬ್ಯಾಟ್ ಸವರಿದ ಚೆಂಡು ನೇರವಾಗಿ ಖವಾಜ ಕೈ ಸೇರಿತು. ಕೊಹ್ಲಿ 5 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

ಇನ್ನು ಟೀಂ ಇಂಡಿಯಾ ಮತ್ತೋರ್ವ ಆರಂಭಿಕ ಬ್ಯಾಟರ್ ಕೆ ಎಲ್ ರಾಹುಲ್ 26 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರೆ, ರಿಷಭ್ ಪಂತ್ ಬ್ಯಾಟಿಂಗ್ 37 ರನ್ ಸಿಡಿಸಿದರು. ಧೃವ್ ಜುರೆಲ್ 11 ಹಾಗೂ ವಾಷಿಂಗ್ಟನ್ ಸುಂದರ್ 4 ರನ್ ಗಳಿಸಿ ಮಿಚೆಲ್ ಮಾರ್ಷ್‌ಗೆ ವಿಕೆಟ್ ಒಪ್ಪಿಸಿದರು.

ಒಂದು ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ನಿತಿಶ್ ಕುಮಾರ್ ರೆಡ್ಡಿ ದಿಟ್ಟ ಬ್ಯಾಟಿಂಗ್ ನಡೆಸುವ ಮೂಲಕ ತಂಡ 150ರ ಗಡಿ ತಲುಪುವಂತೆ ಮಾಡಿದರು. ನಿತಿಶ್ ರೆಡ್ಡಿ 59 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 41 ರನ್ ಬಾರಿಸಿ ಕೊನೆಯವರಾಗಿ ವಿಕೆಟ್ ಒಪ್ಪಿಸಿದರು.

RELATED ARTICLES

Related Articles

TRENDING ARTICLES