Friday, November 22, 2024

IPL 2025 : ಕ್ರಿಕೆಟ್​​ ಪ್ರಿಯರಿಗೆ ಶುಭ ಸುದ್ದಿ ಕೊಟ್ಟ ಬಿಸಿಸಿಐ

ಮುಂಬೈ :  ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯು ಸೇರಿದಂತೆ 2026 ಮತ್ತು 2027ರ ದಿನಾಂಕಗಳನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಪ್ರಕಟಿಸಿದೆ. 2025ರ ಐಪಿಎಲ್ ಟೂರ್ನಿಯು ಮಾರ್ಚ್ 14ರಿಂದ ಮೇ 25ರ ವರೆಗೆ ನಡೆಯಲಿದೆ ಎಂದು ಮಾಹಿತಿ ದೊರೆತಿದೆ.

ಅದೇ ರೀತಿ 2026ರ ಐಪಿಎಲ್ ಟೂರ್ನಿಯು ಮಾರ್ಚ್ 15 ರಿಂದ ಮೇ 31 ಮತ್ತು 2027ರ ಐಪಿಎಲ್ ಟೂರ್ನಿಯು ಮಾರ್ಚ್ 14ರಿಂದ ಮೇ 30 ವರೆಗೆ ನಡೆಯಲಿದೆ ಎಂದು ಬಿಸಿಸಿಐ ತಿಳಿಸಿದೆ. ಪ್ರಸಕ್ತ ಐಪಿಎಲ್‌ನಲ್ಲಿ ಆಟಗಾರರ ಹರಾಜು ಇದೇ ನವೆಂಬರ್​ 24 ಮತ್ತು 25ರಂದು ಸೌದಿ ಅರೇಬಿಯಾದ ಜೆದ್ದಾದಲ್ಲಿ ನಡೆಯಲಿದೆ.

ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಅವರ ಹೆಸರು ಈ ಬಾರಿಯ ಐಪಿಎಲ್ ಬಿಡ್ ಆಗಲಿರುವ ಆಟಗಾರರ ಪಟ್ಟಿಯಲ್ಲಿ ಕಾಣಿಸಿಲ್ಲ. ಆದರೆ, ಅವರ ಮಾಜಿ ಸಹೋದ್ಯೋಗಿ ಜೇಮ್ಸ್ ಆ್ಯಂಡರ್ಸನ್, ಅಮೆರಿಕದ ವೇಗದ ಬೌಲರ್ ಸೌರಭ್ ನೇತ್ರಾವಲ್ಕ‌ರ್, ಇಟಲಿಯ ವೇಗಿ ಬೌಲರ್ ಥಾಮಸ್ ಡ್ರಾಕಾ ಅವರು ಹರಾಜಿಗೆ ಲಭ್ಯವಿರುವ 1,574 ಆಟಗಾರರ ಪಟ್ಟಿಯಲ್ಲಿದ್ದಾರೆ.

ಫ್ರಾಂಚೈಸಿಗಳು ತಮ್ಮ ಕಡೆಯಿಂದ ಅನಿಸಿಕೆಗಳನ್ನು ಕೊಟ್ಟ ನಂತರ, ಈ ಪಟ್ಟಿಯಲ್ಲಿರುವ ಆಟಗಾರರ ಸಂಖ್ಯೆ ಕಡಿತಗೊಳ್ಳಲಿದೆ. ಪಟ್ಟಿಯಲ್ಲಿ ಭಾರತ ತಂಡದಲ್ಲಿರುವ ಪ್ರಮುಖರಾದ ರಿಷಭ್ ಪಂತ್, ಶ್ರೇಯಸ್ ಅಯ್ಯರ್, ಕೆ.ಎಲ್.ರಾಹುಲ್, ಆ‌ರ್.ಅಶ್ವಿನ್ ಮತ್ತು ಯಜುವೇಂದ್ರ ಚಾಹಲ್ ಮೊದಲಾದವರು ಇದ್ದಾರೆ. ಈ ಐದೂ ಮಂದಿ 2 ಕೋಟಿ ಮೂಲಬೆಲೆಯನ್ನು ಹೊಂದಿದ್ದಾರೆ.

ಕಳೆದ ನವೆಂಬರ್‌ನಿಂದ ಗಾಯಾಳಾಗಿರುವ ವೇಗದ ಬೌಲರ್ ಮೊಹಮ್ಮದ್ ಶಮಿ ಅವರನ್ನು ಗುಜರಾತ್ ಜೈಂಟ್ಸ್ ತಂಡದಿಂದ ಮುಕ್ತಗೊಳಿಸಿದ್ದು, ಅವರೂ 2 ಕೋಟಿ ಮೂಲ ಬೆಲೆ ಹೊಂದಿದ್ದಾರೆ. ಎಡಗೈ ವೇಗಿ ಅರ್ಷದೀಪ್ ಸಿಂಗ್ ಸಹ ಇಷ್ಟೇ ಮೌಲ್ಯ ಹೊಂದಿದ್ದಾರೆ.ಗರಿಷ್ಠ 2 ಕೋಟಿ ಮೂಲ ಬೆಲೆ ಹೊಂದಿರುವ ಆಟಗಾರರಲ್ಲಿ ಖಲೀಲ್ ಅಹ್ಮದ್, ಮುಕೇಶ್ ಕುಮಾ‌ರ್, ವೆಂಕಟೇಶ ಅಯ್ಯರ್, ಆವೇಶ್ ಖಾನ್, ದೀಪಕ್ ಚಾಹರ್, ಇಶಾನ್ ಕಿಶನ್ ಮತ್ತು ಭುವನೇಶ್ವರ ಕುಮಾರ್ ಇದ್ದಾರೆ. ಈ ಪಟ್ಟಿಯಲ್ಲಿ ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ದೇವದತ್ತ ಪಡಿಕ್ಕಲ್, ಕೃಣಾಲ್ ಪಾಂಡ್ಯ, ಹರ್ಷಲ್ ಪಟೇಲ್, ಪ್ರಸಿದ್ದ ಕೃಷ್ಣ, ಟಿ.ನಟರಾಜನ್, ವಾಷಿಂಗ್ಟನ್ ಸುಂದರ್ ಮತ್ತು ಉಮೇಶ್ ಯಾದವ್ ಅವರೂ ಇದ್ದಾರೆ. ಈ ಹಿಂದಿನ ಐಪಿಎಲ್ ಹರಾಜಿನಲ್ಲಿ ‘ಅನ್‌ಸೋಲ್ಡ್’ ಆಗಿದ್ದ ಸರ್ಫರಾಜ್ ಖಾನ್ ಮತ್ತು ಪೃಥ್ವಿ ಶಾ ಇಬ್ಬರೂ ತಮ್ಮನ್ನು 75 ಲಕ್ಷ ಮೂಲಬೆಲೆಗೆ ನೋಂದಾಯಿಸಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES