ಜಾರ್ಜಟೌನ್ : ಗಯಾನಾ ದೇಶವು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತನ್ನ ಅತ್ಯುನ್ನತ ನಾಗರಿಕ ಗೌರವ ‘ದಿ ಆರ್ಡರ್ ಆಫ್ ಎಕ್ಸಲನ್ಸ್’ ನೀಡಿ ಗೌರವಿಸಿದೆ. ಜಾರ್ಜ್‌ಟೌನ್‌ನಲ್ಲಿ ನಡೆಯುತ್ತಿರುವ ಭಾರತ-ಕೆರಿಕಮ್ ಶೃಂಗಸಭೆಯ ವೇಳೆಯಲ್ಲಿ ಗಯಾನಾದ ಅಧ್ಯಕ್ಷ ಇರ್ಫಾನ್ ಅಲಿ ಅವರು ಪ್ರಧಾನಿ ಮೋದಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.
ಗಯಾನಾದ ಅತ್ಯುನ್ನತ ಗೌರವ ನೀಡಿದ್ದಕ್ಕಾಗಿ ಅಧ್ಯಕ್ಷ ಇರ್ಫಾನ್ ಅಲಿ ಅವರಿಗೆ ಧನ್ಯವಾದಗಳನ್ನು ಸಲ್ಲಿಸಿರುವ ಪ್ರಧಾನಿ ಮೋದಿ, ‘140 ಕೋಟಿ ಭಾರತೀಯರಿಗೆ ದೊರಕಿರುವ ಮನ್ನಣೆ ಇದಾಗಿದೆ’ ಎಂದು ಬಣ್ಣಿಸಿದ್ದಾರೆ. ಗಯಾನಾ ಅಧ್ಯಕ್ಷರೊಂದಿಗೆ ಫಲಪ್ರದ ಚರ್ಚೆ ನಡೆಸಿರುವುದಾಗಿ ಪ್ರಧಾನಿ ಮೋದಿ ತಿಳಿಸಿದ್ದಾರೆ. ‘ಗಯಾನಾದ ಅಧ್ಯಕ್ಷರು ಭಾರತದೊಂದಿಗೆ ಅತ್ಯುತ್ತಮ ಬಾಂಧವ್ಯವನ್ನು ಕಾಪಾಡಿಕೊಂಡಿದ್ದಾರೆ. ಉಭಯ ದೇಶಗಳ ನಡುವಣ ಅಭಿವೃದ್ಧಿ ಸಹಕಾರ, ಕೌಶಲ್ಯ ಅಭಿವೃದ್ಧಿ, ಕೃಷಿ, ಔಷಧಿ, ಶಿಕ್ಷಣ ಮತ್ತು ಇಂಧನ ವಲಯಗಳಲ್ಲಿ ಸಹಕಾರದ ಕುರಿತು ಚರ್ಚಿಸಲಾಗಿದೆ’ ಎಂದು ತಿಳಿಸಿದ್ದಾರೆ.