Wednesday, January 29, 2025

ಪತ್ನಿ ಬೇಬಿಬಂಪ್​ಗೆ ಮುತ್ತಿಟ್ಟ ಪತಿ : ಹರಿಪ್ರಿಯಾ-ವಸಿಷ್ಠ ಸಿಂಹ ದಂಪತಿ ಸ್ಪೆಷಲ್​ ಫೋಟೋಶೂಟ್​

ನಟ ವಸಿಷ್ಠ ಸಿಂಹ ಮತ್ತು ನಟಿ ಹರಿಪ್ರಿಯಾ ಚಂದನವನದಲ್ಲಿ ತಮ್ಮದೇ ಬೇಡಿಕೆ ಹೊಂದಿರುವ ತಾರಾ ದಂಪತಿ ಶೀಘ್ರದಲ್ಲೇ ಪೋಷಕರಾಗಿ ಬಡ್ತಿ ಪಡೆಯಲಿದ್ದಾರೆ. ತಂದೆ ತಾಯಿಯಾಗುತ್ತಿರುವ ಜನಪ್ರಿಯ ನಟ ನಟಿ ವಿಶೇಷ ಫೋಟೋಶೂಟ್​ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ.

ಸ್ಯಾಂಡಲ್​ವುಡ್​​ ತಾರೆ ಹರಿಪ್ರಿಯಾ ತಮ್ಮ ಗರ್ಭಾವಸ್ಥೆಯ ದಿನಗಳನ್ನು ಆನಂದಿಸುತ್ತಿದ್ದಾರೆ. ಮುದ್ದಿನ ಮಡದಿಯ ಕಾಳಜಿಯಲ್ಲಿ ವಸಿಷ್ಠ ಸಿಂಹ ಬ್ಯುಸಿಯಾಗಿದ್ದಾರೆ. ಶೀಘ್ರದಲ್ಲೇ ಪೋಷಕರಾಗಲಿರುವ ಲವ್​​​ಬರ್ಡ್ಸ್​​​ ವಿಶೇಷ ಬೇಬಿ ಬಂಪ್​ ಫೋಟೋಶೂಟ್​ ಮಾಡಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಬೇಬಿಬಂಪ್​ ಫೋಟೋಶೂಟ್​ಗೆ ಕನ್ನಡ ಹಬ್ಬದ ಸಲುವಾಗಿ. ನಾವು ಎಂದು ತಾರಾ ದಂಪತಿ ಕ್ಯಾಪ್ಷನ್​ ನೀಡಿದ್ದಾರೆ. ಕೆಂಪು ಹಳದಿ ಉಡುಗೆಯಲ್ಲಿ ನಟ ನಟಿ ಮಿಂಚಿದ್ದಾರೆ. ವಸಿಷ್ಠ ಸಿಂಹ ಹಳದಿ ಬಣ್ಣದ ಶೇರ್ವಾನಿ ಧರಿಸಿದ್ದರೆ, ಹರಿಪ್ರಿಯಾ ರೆಡ್​​ ಟ್ರೆಡಿಶನಲ್​ ಔಟ್​ಫಿಟ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಹಲವು ಫೋಟೋಗಳುಳ್ಳ ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ಪತ್ನಿಯ ಬೇಬಿಬಂಪ್​ ಹಿಡಿದು ಪ್ರೀತಿ ವ್ಯಕ್ತಪಡಿಸಿದ್ದಾರೆ. ಮತ್ತೊಂದು ಕ್ಷಣದಲ್ಲಿ ಬೇಬಿಬಂಪ್​ಗೆ ಮುತ್ತಿಟ್ಟು ಮಗುವಿನ ಮೇಲೆ ಪ್ರೀತಿಯ ಧಾರೆಯೆದಿದ್ದಾರೆ. ಎಲ್ಲಾ ಫೋಟೋಗಳು ಪ್ರೀತಿಯ ಸಂಕೇತದಂತಿದ್ದು, ಅಭಿಮಾನಿಗಳು ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿವೆ.

ನವೆಂಬರ್​ 1ರಂದು ತಾವು ಪೋಷಕರಾಗುತ್ತಿರುವ ವಿಚಾರವನ್ನು ಅಧಿಕೃತವಾಗಿ ಘೋಷಿಸಿದರು. ”ಪ್ರೀತಿಯ ಕನ್ನಡ ಮನಸ್ಸುಗಳಿಗೆ ಕರ್ನಾಟಕ ರಾಜ್ಯೋತ್ಸವದ ಹಾಗೂ ದೀಪಾವಳಿಯ ಶುಭಾಶಯಗಳು. ಈ ಶುಭ ದಿನದಂದು, ನಿಮ್ಮೆಲ್ಲರೊಡನೆ ಶುಭಸುದ್ದಿಯೊಂದನ್ನು ಹಂಚಿಕೊಳ್ಳುವಾಸೆ ನಮ್ಮದು. ನಿಮ್ಮಲ್ಲಿ ಬಹುತೇಕರು ಊಹಿಸಿದ್ದು ಸರಿಯೇ. ಹೌದು, ನಾವು ನಮ್ಮ ‘ಕುಡಿ’ಗಾಗಿ ಎದುರುನೋಡುತ್ತಿದ್ದೇವೆ. ನಿಮ್ಮೆಲ್ಲರ ಹಾರೈಕೆ- ಆಶೀರ್ವಾದಗಳ ನಿರೀಕ್ಷೆಯಲ್ಲಿ” ಎಂದು ಬರೆದುಕೊಂಡಿದ್ದರು. ಮಾಲ್ಡೀವ್ಸ್​ನಲ್ಲಿ ಕಳೆದ ಸುಂದರ ಕ್ಷಣಗಳನ್ನು ಹಂಚಿಕೊಂಡು ಸಿಹಿಸುದ್ದಿ ನೀಡಿದ್ದರು.

ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಕಳೆದ ವರ್ಷ ದಾಂಪತ್ಯ ಜೀವನ ಶುರು ಮಾಡಿದ್ದಾರೆ. ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಪ್ರೇಮಪಕ್ಷಿಗಳು ಎಲ್ಲಿಯೂ ತಮ್ಮ ಗುಟ್ಟನ್ನು ಬಿಟ್ಟುಕೊಟ್ಟಿರಲಿಲ್ಲ. ಮದುವೆಗೆ ಇನ್ನೇನು ಕೆಲ ದಿನಗಳಿವೆ ಎನ್ನುವಾಗ ಸುದ್ದಿ ಹೊರಬಿತ್ತು. 2023ರ ಜನವರಿ 26ರಂದು ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಅದ್ಧೂರಿಯಾಗಿ ಹಸೆಮಣೆ ಏರಿದರು. ಸಮಾರಂಭಕ್ಕೆ ಕುಟುಂಬಸ್ಥರು, ಆಪ್ತರು ಸಾಕ್ಷಿಯಾಗಿದ್ದರು

RELATED ARTICLES

Related Articles

TRENDING ARTICLES