ರಾಯಚೂರು : ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ(PDO) ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆ ವೇಳೆ ಕರ್ನಾಟಕ ಲೋಕಸೇವಾ ಆಯೋಗದಿಂದ(KPSC) ಭಾರೀ ಲೋಪವಾಗಿದ್ದು. ಪ್ರಶ್ನೆ ಪತ್ರಿಕೆಯನ್ನು 30 ನಿಮಿಷಗಳಷ್ಟು ತಡವಾಗಿ ಕೊಟ್ಟಿದ್ದು. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ವಿಧ್ಯಾರ್ಥಿಗಳು ಆರೋಪಿಸಿ ಪ್ರತಿಭಟನೆ ನಡೆಸಿದ್ದಾರೆ.
ಕಲ್ಯಾಣ ಕರ್ನಾಟಕದ ಖಾಲಿಯಿರುವ 97 ಹುದ್ದೆಗಳಿಗೆ ನಡೆಯುತ್ತಿರುವ ಪರೀಕ್ಷೆಯಲ್ಲಿ ಅಕ್ರಮದ ವಾಸನೆ ಬಂದಿದ್ದು.ಇಂದು ಬೆಳಿಗ್ಗೆ 10 ರಿಂದ 11:30ರವರೆಗೆ ನಡೆಯಬೇಕಿದ್ದ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆಯನ್ನು ತಡವಾಗಿ ವಿತರಿಸಿದ್ದು. ವಿಧ್ಯಾರ್ಥಿಗಳು ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ಪ್ರತಿಭಟನೆ ನಡೆಸುತ್ತಿದ್ದಾರೆ.
ರಾಯಚೂರಿನ ಸಿಂಧನೂರು ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಘಟನೆ ನಡೆದಿದ್ದು. ಪ್ರಶ್ನೆ ಪತ್ರಿಕೆ ತಡವಾಗಿ ಕೊಟ್ಟಿದ್ದಕ್ಕೆ ಸ್ಥಳೀಯ ತಹಶೀಲ್ದಾರ್ ಭೇಟಿ ನೀಡಿ ಅರ್ಧ ಗಂಟೆ ಹೆಚ್ಚುವರಿ ಸಮಯ ನೀಡುವುದಾಗಿ ಭರವಸೆ ನೀಡಿದ್ದಾರೆ. ಆದರೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ಹೇಳುತ್ತಿರುವ ಸುಮಾರು 80%ರಷ್ಟು ವಿಧ್ಯಾರ್ಥಿಗಳು ಪರೀಕ್ಷೆಯನ್ನು ತ್ಯಜಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಕೇವಲ 12 ಜನ ಅಭ್ಯರ್ಥಿಗಳು ಮಾತ್ರ ಪರೀಕ್ಷೆ ಬರೆಯುತ್ತಿದ್ದು. ಉಳಿದ 100ಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆ ಬರೆಯದೆ ದೂರ ಉಳಿದಿದ್ದಾರೆ. ಇಂದು ಎರಡು ಪರೀಕ್ಷೆ ನಡೆಯುತ್ತಿದ್ದು ಮಧ್ಯಾಹ್ನದ ನಂತರ 2 ಗಂಟೆಯಿಂದ 4 ಗಂಟೆಯವರೆಗು ಮತ್ತೊಂದು ಪರೀಕ್ಷೆ ನಡೆಯಲಿದೆ ಎಂದು ಮಾಹಿತಿ ದೊರೆತಿದೆ .