Tuesday, December 24, 2024

ಮಹಾರಾಷ್ಟ್ರ ಚುನಾವಣಾ ಪ್ರಚಾರದಲ್ಲಿ ಕರ್ನಾಟಕದ ಗ್ಯಾರಂಟಿ ಜಾಹೀರಾತಿನ ಪ್ರಚಾರ

ಮಹಾರಾಷ್ಟ್ರ ಚುನಾವಣೆ ಪ್ರಚಾರದ ಅಬ್ಬರ ತೀವ್ರಗೊಂಡಿದೆ. ಈ ನಡುವೆ ಸಿಎಂ ಸಿದ್ದರಾಮಯ್ಯ ಅವರು ಕೂಡಾ ಮಹಾರಾಷ್ಟ್ರದಲ್ಲಿ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಚುನಾವಣಾ ಪ್ರಚಾರಕ್ಕಾಗಿ ಮಹಾರಾಷ್ಟ್ರದ ಶೋಲಾಪುರಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ ಹಾಗೂ ಸಂಸದರಾದ ಪ್ರಣತಿ ಶಿಂಧೆ ಅವರು ಸ್ವಾಗತ ಕೋರಿದರು.

ಸಚಿವರಾದ ಎಂ.ಬಿ. ಪಾಟೀಲ್, ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಹಾಜರಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಮಂಗಳ್ ವೇಡಾ ದಲ್ಲಿ ಮಹಾರಾಷ್ಟ್ರ ರಾಜ್ಯ ಕಾಂಗ್ರೆಸ್ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಬೃಹತ್ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾಣಲು ಸ್ಥಳೀಯರು ಸಹಸ್ರಾರು ಸಂಖ್ಯೆಯಲ್ಲಿ ಮುಗಿಬಿದ್ದರು.‌ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ, ಸಂಸದೆ ಪ್ರಣತಿ ಶಿಂಧೆ, ಸಚಿವರಾದ ಎಂ.ಪಿ.ಪಾಟೀಲ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮಂಗಳ್ ವೇಡಾ ಜನತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕರಿ ಕಂಬಳಿ ಹೊದಿಸಿ ವಿಠ್ಠಲ್ ಭಗವಾನ್ ಅವರ ಮೂರ್ತಿಯನ್ನು ನೀಡಿ ಸನ್ಮಾನಿಸಿದರು.

ಮಹಾರಾಷ್ಟ್ರದ ಪತ್ರಿಕೆಗಳಲ್ಲಿ ಕರ್ನಾಟಕದ ಗ್ಯಾರಂಟಿ ಯೋಜನೆಗಳ ಜಾಹೀರಾತನ್ನು ಪ್ರಕಟ ಮಾಡಲಾಗಿದೆ. ಈ ವಿಚಾರವಾಗಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, “ದೇಶದಲ್ಲಿ ಎಲ್ಲಾ ಪದಾರ್ಥಗಳ ಬೆಲೆ ಏರಿಕೆಯಾಗಿದೆ ಎಂದು ಬಿಜೆಪಿಗೆ ಅರ್ಥವಾಗಿರುವ ಕಾರಣಕ್ಕೆ ಅವರೂ ಸಹ ಗ್ಯಾರಂಟಿ ಯೋಜನೆಗಳನ್ನು ನೀಡುತ್ತಿದ್ದು, ಕರ್ನಾಟಕ ಮಾದರಿಯನ್ನು ಹಿಂಬಾಲಿಸುತ್ತಿದ್ದಾರೆ. ಅದಕ್ಕೆ ಮಹಾರಾಷ್ಟ್ರದಲ್ಲಿ ಮಹಿಳೆಯರಿಗೆ 1,500 ರೂಪಾಯಿ ನೀಡುತ್ತಿದ್ದಾರೆ” ಎಂದರು. ಬಿಜೆಪಿ ನೇತೃತ್ವದ ಮಹಾಯುತಿ ಒಕ್ಕೂಟ ಚುನಾವಣೆಯಲ್ಲಿ ಗೆದ್ದರೆ ಮಹಿಳೆಯರಿಗೆ 2,100 ಕೊಡುವುದಾಗಿ ಹೇಳಿದೆ. ನಾವು 3,000, ಯುವಕರಿಗೆ 4,000 ಹಾಗೂ 25 ಸಾವಿರ ಮೊತ್ತದ ಜೀವವಿಮೆ ನೀಡುವುದಾಗಿ ಭರವಸೆ ನೀಡಿದ್ದೇವೆ ಎಂದು ತಿಳಿಸಿದರು.

ಇದೇ ವೇಳೆ ಕರ್ನಾಟಕದ ಗ್ಯಾರಂಟಿ ಯೋಜನೆಗಳ ಬಗ್ಗೆ ಪತ್ರಿಕೆಗಳಲ್ಲಿ ನೀಡಿರುವ ಜಾಹಿರಾತನ್ನು ಪ್ರದರ್ಶಿಸಿದರು. ಮಹಾರಾಷ್ಟ್ರದಲ್ಲಿ 160 ಸ್ಥಾನದ ಭರವಸೆ! ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳನ್ನು ನೀಡಿಯೇ ಇಲ್ಲ ಎಂದು ಸುಳ್ಳು ಪ್ರಚಾರ ಮಾಡಿದ್ದರು. ಅದಕ್ಕೆ ನಾವು ಅಲ್ಲಿನ ಆಡಳಿತರೂಡ ಪಕ್ಷಗಳಿಗೆ ಕರ್ನಾಟಕಕ್ಕೆ ಭೇಟಿ ನೀಡುವಂತೆ ಸವಾಲು ಹಾಕಿದ್ದೆವು. ಅಲ್ಲದೇ, ವಿಶೇಷ ಬಸ್ ಹಾಗೂ ವಿಮಾನ ಕಾಯ್ದಿರಿಸುವುದಾಗಿ ಹೇಳಿದ್ದೆವು. ನಮ್ಮ ಪಕ್ಷದ ಆಂತರಿಕ ಸಮೀಕ್ಷೆ ಪ್ರಕಾರ 160 ಸ್ಥಾನಗಳನ್ನು ಗೆಲ್ಲುವ ವರದಿ ಇದೆ ಎಂದು ತಿಳಿಸಿದರು. ಮಹಾರಾಷ್ಟ್ರದಲ್ಲಿ ಶುಕ್ರವಾರವೂ ಚುನಾವಣಾ ಪ್ರಚಾರ ಮಾಡಿದ್ದು, ಶನಿವಾರ ಹಾಗೂ ಭಾನುವಾರ ಪ್ರಚಾರದಲ್ಲಿ ಭಾಗವಹಿಸುವೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

RELATED ARTICLES

Related Articles

TRENDING ARTICLES