Thursday, January 23, 2025

ಜಾಗತಿಕ ಪ್ರಕ್ಷುಬ್ಧತೆಯ ನಡುವೆಯೂ ಭಾರತದ ಆರ್ಥಿಕತೆ ಬಲಿಷ್ಠ: ಆರ್​ಬಿಐ ಗವರ್ನರ್ ಶಕ್ತಿಕಾಂತ್ ದಾಸ್

ಜಾಗತಿಕ ಮಟ್ಟದಲ್ಲಿ ಪ್ರಕ್ಷುಬ್ಧತೆಯ ನಡುವೆಯೂ ಭಾರತದ ಆರ್ಥಿಕತೆ ಬಲಿಷ್ಠವಾಗಿದೆ ಎಂದು ಆರ್​ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ. ಸ್ಥೂಲ ಆರ್ಥಿಕ ಮೂಲಭೂತ ಅಂಶಗಳು, ಸ್ಥಿರ ಹಣಕಾಸು ವ್ಯವಸ್ಥೆ ಮತ್ತು ಚೇತರಿಸಿಕೊಳ್ಳುವ ಬಾಹ್ಯ ವಲಯಗಳ ಕಾರಣದಿಂದಾಗಿ ಭಾರತದ ಆರ್ಥಿಕತೆ ಬಲಿಷ್ಠವಾಗಿದೆ ಆರ್ ಬಿಐ ಗವರ್ನರ್ ಹೇಳಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ತಮ್ಮ ಮುಖ್ಯ ಭಾಷಣ ಮಾಡಿದ ಅವರು, ವಿವೇಕಯುತ ಮತ್ತು ಪೂರ್ವಭಾವಿ ನೀತಿಯ ವಿಧಾನಗಳ ಮೂಲಕ “ದೇಶದ ಮೂಲಭೂತ ಅಂಶಗಳನ್ನು ಇನ್ನಷ್ಟು ಬಲಪಡಿಸಲು ಪ್ರತಿ ಅವಕಾಶವನ್ನು ಬಳಸಿಕೊಳ್ಳಲಾಗುತ್ತಿದೆ” ಎಂದು ಹೇಳಿದ್ದಾರೆ. ಆರ್ಥಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಗಮನಹರಿಸಲಾಗಿದೆ, ಇದು ಬೆಳವಣಿಗೆ ಮತ್ತು ಸಮೃದ್ಧಿಯನ್ನು ಉಂಟುಮಾಡುತ್ತದೆ ಎಂದು ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.

ಆರ್ಥಿಕ ಬೆಳವಣಿಗೆ ಕುಂಠಿತವಾಗುವ ಸೂಚನೆಗಳ ನಡುವೆ ಶಕ್ತಿಕಾಂತ್ ದಾಸ್ ಈ ಹೇಳಿಕೆ ನೀಡಿರುವುದು ಮಹತ್ವ ಪಡೆದುಕೊಂಡಿದೆ. ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಕಾರ್ಪೊರೇಟ್ ಲಾಭದಾಯಕತೆ ಎರಡು ವರ್ಷಗಳಲ್ಲಿ ಅತ್ಯಂತ ಕಡಿಮೆಯಾಗಿದೆ, ಅನೇಕ ಪ್ರಮುಖ ವಲಯಗಳಿಗೆ ಆದಾಯದ ಬೆಳವಣಿಗೆಯು ಹಲವು ತ್ರೈಮಾಸಿಕಗಳಲ್ಲಿ ಕಡಿಮೆಯಾಗಿದೆ. ಅಲ್ಲದೆ, ಅಕ್ಟೋಬರ್ ಹಣದುಬ್ಬರ ಆಹಾರದ ಬೆಲೆ ಏರಿಕೆಯ ಪರಿಣಾಮ, ಆರ್‌ಬಿಐ ಅಂದಾಜು ಮಟ್ಟವಿದ್ದ 6.2ಪ್ರತಿಶತಕ್ಕಿಂತ ಹೆಚ್ಚಾಗಿದೆ.

ಇದೇ ಸಮಾರಂಭದಲ್ಲಿ, ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಮಾತನಾಡಿದ್ದು, “ಕೇಂದ್ರ ಬ್ಯಾಂಕ್ ಬಡ್ಡಿದರಗಳನ್ನು ಕಡಿತಗೊಳಿಸಬೇಕು ಎಂಬುದನ್ನು ನಾನು ನಂಬುತ್ತೇನೆ. ಬೆಳವಣಿಗೆಗೆ ಮತ್ತಷ್ಟು ಉತ್ತೇಜನದ ಅಗತ್ಯವಿದೆ. ಬಡ್ಡಿದರಗಳನ್ನು ನಿರ್ಧರಿಸುವಾಗ ಆಹಾರ ಹಣದುಬ್ಬರವನ್ನು ಪರಿಗಣಿಸುವುದು ಸಂಪೂರ್ಣವಾಗಿ ದೋಷಪೂರಿತ ಸಿದ್ಧಾಂತವಾಗಿದೆ ಎಂದು ಹೇಳಿದ್ದು ಇದು ತಮ್ಮ ವೈಯಕ್ತಿಕ ಅಭಿಪ್ರಾಯವಾಗಿದ್ದು ಸರ್ಕಾರದ ಅಭಿಪ್ರಾಯಗಳಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.ಪ್ರಸಕ್ತ ಹಣಕಾಸು ವರ್ಷದಲ್ಲಿ ಆರ್‌ಬಿಐ ತನ್ನ ಆರ್ಥಿಕ ಬೆಳವಣಿಗೆಯ ಅಂದಾಜನ್ನು ಶೇ.7.2ಕ್ಕೆ ನಿಗದಿಪಡಿಸಿದೆ.

RELATED ARTICLES

Related Articles

TRENDING ARTICLES