Wednesday, January 22, 2025

ಮೊದಲ ಎಸೆತದಲ್ಲೇ ಸಿಕ್ಸ‌ರ್: ಸೂರ್ಯಕುಮಾ‌ರ್ ದಾಖಲೆ ಸರಿಗಟ್ಟಿದ ರಮಣದೀಪ್ ಸಿಂಗ್

ಸೌತ್​ ಆಫ್ರಿಕಾ :  ಆಲ್‌ರೌಂಡರ್ ರಮಣದೀಪ್ ಸಿಂಗ್ ಅವರು ಅಂತರರಾಷ್ಟ್ರೀಯ ಚುಟುಕು ಕ್ರಿಕೆಟ್‌ನಲ್ಲಿ ತಾವೆದುರಿಸಿದ ಮೊದಲ ಎಸೆತವನ್ನೇ ಸಿಕ್ಸರ್‌ಗೆ ಅಟ್ಟುವ ಮೂಲಕ ಭಾರತ ಟಿ20 ತಂಡದ ನಾಯಕ ಸೂರ್ಯಕುಮಾ‌ರ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ನಾಲ್ಕು ಪಂದ್ಯಗಳ ಸರಣಿಯ ಮೂರನೇ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಪದಾರ್ಪಣೆ ಮಾಡುವ ಅವಕಾಶ ಗಿಟ್ಟಿಸಿದ ರಮಣದೀಪ್, ಈ ಅಪರೂಪದ ಸಾಧನೆ ಮಾಡಿದ್ದಾರೆ.18ನೇ ಓವರ್‌ನ 5ನೇ ಎಸೆತದಲ್ಲಿ ರಿಂಕು ಸಿಂಗ್ ಔಟಾದ ಬಳಿಕ ಕ್ರೀಸ್‌ಗಿಳಿದ ರಮಣದೀಪ್, ಅಂತಿಮ ಎಸೆತವನ್ನು ಮಿಡ್-ಆನ್‌ನತ್ತ ಬೌಂಡರಿ ಗೆರೆಯಾಚೆಗೆ ಬಾರಿಸಿದರು. ಇನಿಂಗ್ಸ್‌ನಲ್ಲಿ ಒಟ್ಟು 6 ಎಸೆತಗಳನ್ನು ಎದುರಿಸಿದ ಅವರು ಒಂದು ಸಿಕ್ಸರ್ ಹಾಗೂ ಬೌಂಡರಿ ಸಹಿತ 15 ರನ್ ಗಳಿಸಿದರು.

ಸೆಂಚುರಿಯನ್‌ನಲ್ಲಿ ಬುಧವಾರ ನಡೆದ ಈ ಪಂದ್ಯದಲ್ಲಿ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅರ್ಧಶತಕ ಗಳಿಸಿದರೆ, ಯುವ ಬ್ಯಾಟರ್ ತಿಲಕ್ ವರ್ಮಾ (56 ಎಸೆತಗಳಲ್ಲಿ ಅಜೇಯ 107 ರನ್) ಅಮೋಘ ಶತಕ ಸಿಡಿಸಿದರು. ಹೀಗಾಗಿ ಭಾರತ ತಂಡದ ಮೊತ್ತ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 219ಕ್ಕೆ ಏರಿತು. ಬೃಹತ್ ಗುರಿ ಬೆನ್ನತ್ತಿದ ಆಫ್ರಿಕನ್ನರು, ಭಾರಿ ಪೈಪೋಟಿ ನೀಡಿದರು. ನಿಗದಿತ ಓವರ್‌ಗಳಲ್ಲಿ 7 ವಿಕೆಟ್‌ಗೆ 207 ರನ್ ಗಳಿಸಿ ಅಲ್ಪ ಅಂತರದ ಸೋಲೊಪ್ಪಿಕೊಂಡರು.

ಟಿ20 ಅಂ.ರಾ. ಕ್ರಿಕೆಟ್‌ನಲ್ಲಿ ಎದುರಿಸಿದ ಮೊದಲ ಎಸೆತವನ್ನೇ ಸಿಕ್ಸರ್‌ಗೆ ಅಟ್ಟಿದ ಎರಡನೇ ಭಾರತೀಯ ಬ್ಯಾಟರ್ ರಮಣದೀಪ್ ಸಿಂಗ್. 2021ರಲ್ಲಿ ಇಂಗ್ಲೆಂಡ್ ಎದುರಿನ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದ ಸೂರ್ಯಕುಮಾ‌ರ್ ಯಾದವ್, ವಿಶ್ವಶ್ರೇಷ್ಠ ವೇಗಿ ಜೋಪ್ರಾ ಆರ್ಚರ್ ಎಸೆತವನ್ನು ಸಿಕ್ಸರ್‌ಗೆ ಅಟ್ಟಿದ್ದರು.

RELATED ARTICLES

Related Articles

TRENDING ARTICLES