Tuesday, January 21, 2025

ಭಾರತದಲ್ಲಿ ರಹಸ್ಯ ವಾಸ್ತವ್ಯ: ಶೇಖ್ ಹಸೀನಾ ಆಶ್ರಯ ಪಡೆದು 100 ದಿನ!

ದೆಹಲಿ : ಕಳೆದ ಐದಾರು ತಿಂಗಳ ಹಿಂದೆ ಎರಡು ಸೂಟ್ ಕೇಸ್ ಗಳನ್ನು ಹಿಡಿದುಕೊಂಡು ಮಹಿಳೆಯೊಬ್ಬಳು ಕಾರಿನಿಂದ ಕೆಳಗಿಳಿಯುತ್ತಿರುವ ದೃಶ್ಯದ ವಿಡಿಯೋ ವೈರಲ್ ಆಗಿತ್ತು. ಹೌದು ಅದು ಬೇರೆ ಯಾರೂ ಅಲ್ಲ, ಬಾಂಗ್ಲಾದೇಶದಿಂದ ಪದಚ್ಯುತಗೊಂಡ ಶೇಖ್ ಹಸೀನಾ ಅವರದ್ದು! ಇದೀಗ ಹಸೀನಾ ಭಾರತದಲ್ಲಿ ನಿಗೂಢವಾಗಿ ಕಾಲಕಳೆಯುತ್ತಿದ್ದಾರೆ.

ಆರಂಭದಲ್ಲಿ ಶೇಖ್ ಹಸೀನಾ ಬೇರೆ ದೇಶದಲ್ಲಿ ಆಶ್ರಯ ಪಡೆಯಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಕಳೆದ ಆಗಸ್ಟ್ 5ರಂದು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರನ್ನು ಬಲವಂತದಿಂದ ದೇಶ ತೊರೆಯುವಂತೆ ಮಾಡಿದ್ದು, ನಂತರ ಹಸೀನಾ ಭಾರತದಲ್ಲಿ ನಿರಾಶ್ರಿತರಾಗಿ ಆಶ್ರಯ ಪಡೆದಿದ್ದರು.

ಇದೀಗ ಅವಾಮಿ ಲೀಗ್ ಪಕ್ಷದ ವರಿಷ್ಠೆ. ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಭಾರತದಲ್ಲಿ ಠಿಕಾಣಿ ಹೂಡಿ ಇಂದಿಗೆ ಬರೋಬ್ಬರಿ 100 ದಿನಗಳಾಗಿವೆ ಎಂದು ವರದಿ ವಿವರಿಸಿದೆ. ಶೇಖ್ ಹಸೀನಾ ವಾಸ್ತವ್ಯ ರಹಸ್ಯವಾಗಿ ಇಡಲಾಗಿತ್ತು.ಕೆಲವು ಮಾಧ್ಯಮಗಳ ವರದಿ ಪ್ರಕಾರ, ಶೇಖ್ ಹಸೀನಾ ದೆಹಲಿಯ ಬಿಗಿ ಭದ್ರತೆಯ ಪ್ರದೇಶದಲ್ಲಿನ ಬಂಗಲೆಯೊಂದರಲ್ಲಿ ವಾಸ್ತವ್ಯ ಹೂಡಿದ್ದು, 24×7 ಬಂದೋಬಸ್ತ್ ನೀಡಲಾಗಿದೆ ಎಂದು ವರದಿ ವಿವರಿಸಿದೆ.

ಶೇಖ್ ಹಸೀನಾಗೆ ದೆಹಲಿ ಅಪರಿಚಿತವಲ್ಲ. ಯಾಕೆಂದರೆ 1975ರಲ್ಲಿ ಬಾಂಗ್ಲಾದೇಶದ ಅಧ್ಯಕ್ಷ, ಹಸೀನಾ ತಂದೆ ಮುಜಿಬುರ್ ರಹಮಾನ್ ಅವರನ್ನು ಹತ್ಯೆಗೈದ ಸಂದರ್ಭದಲ್ಲಿಯೂ ಹಸೀನಾ ಮತ್ತು ಸಹೋದರಿ ದೆಹಲಿಯಲ್ಲಿ ಆಶ್ರಯ ಪಡೆದಿದ್ದರು.ಕ್ಷಿಪ್ರ ಕ್ರಾಂತಿಯಲ್ಲಿ ಸೇನಾ ಅಧಿಕಾರಿಗಳ ಗುಂಡಿನ ದಾಳಿಯಿಂದ ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ಶೇಖ್ ಹಸೀನಾ ಮತ್ತು ಸಹೋದರಿ ಶೇಖ್ ರೆಹಾನಾ ಅಂದು ದೆಹಲಿಯಲ್ಲಿ ವಾಸ್ತವ್ಯ ಹೂಡಿದ್ದರು. 1975ರಿಂದ 1981ರವರೆಗೆ ಹಸೀನಾ, ತನ್ನ ಮಕ್ಕಳು, ಪತಿ ಹಾಗೂ ಸಹೋದರಿ ಜತೆ ಸುಮಾರು ಆರು ವರ್ಷಗಳ ಕಾಲ ಯಾರಿಗೂ ಗುರುತು ಪತ್ತೆಹಚ್ಚದ ರೀತಿಯಲ್ಲಿ ವಾಸವಾಗಿದ್ದರು.

ನಂತರ ಬಾಂಗ್ಲಾದೇಶಕ್ಕೆ ಮರಳಿದ್ದ ಶೇಖ್ ಹಸೀನಾ ರಾಜಕೀಯ ಪಕ್ಷದ ಮುಖ್ಯಸ್ಥರಾಗಿ ಸಾಕಷ್ಟು ಶ್ರಮಪಟ್ಟ ಬಳಿಕ ದೇಶದ ಪ್ರಧಾನಿ ಹುದ್ದೆಗೆ ಏರಿದ್ದರು. ತನ್ನ ಆಪತ್ಕಾಲದಲ್ಲಿ ನೆರವು ನೀಡಿದ ಭಾರತಕ್ಕೆ ಹಸೀನಾ ಅಭಿನಂದನೆ ತಿಳಿಸಿದ್ದರು. ನಾನು ಎರಡನೇ ಬಾರಿ ಭಾರತದಲ್ಲಿ ರಹಸ್ಯವಾಗಿ ಜೀವನ ಸಾಗಿಸುವ ಕಾಲ ಬರುತ್ತದೆ ಎಂಬುದನ್ನು ಊಹಿಸಿರಲಿಲ್ಲ ಎಂದು ಹಸೀನಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಂಡಿಯಾ ಟುಡೇ ಮೂಲಗಳ ಪ್ರಕಾರ, ಶೇಖ್ ಹಸೀನಾ ಅವರ ಭದ್ರತೆಗಾಗಿ ಎನ್ಎಸ್​ಜಿ ಕಮಾಂಡೋಸ್​ಗಳನ್ನು ನಿಯೋಜಿಸಲಾಗಿದೆ. ಬಾಹ್ಯವಾಗಿಯೂ ಬಿಗಿ ಭದ್ರತೆ ನೀಡಲಾಗಿದೆ. ಏತನ್ಮಧ್ಯೆ ಭಾರತದಲ್ಲಿರುವ ಹಸೀನಾ ಬ್ರಿಟನ್​ನಲ್ಲಿ ಆಶ್ರಯ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.

RELATED ARTICLES

Related Articles

TRENDING ARTICLES