ಮುಂಬೈ: ನ್ಯೂಜಿಲೆಂಡ್ ವಿರುದ್ಧ ನಡೆದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಹೀನಾಯ ಸೋಲು ಕಂಡಿದೆ. ಈ ಸೋಲಿನೊಂದಿಗೆ 24 ವರ್ಷಗಳ ಬಳಿಕ ತವರಿನಲ್ಲಿ ಸರಣಿ ಸೋತ ಅಪಖ್ಯಾತಿಯನ್ನು ಹೆಗಲಿಗೇರಿಸಿಕೊಂಡಿದೆ. ಕೊನೆಯದ್ದಾಗಿ ಭಾರತ 2000 ಇಸವಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ವೈಟ್‌ವಾಶ್ ಆಗಿತ್ತು.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ 3ನೇ ಟೆಸ್ಟ್ ಪಂದ್ಯದಲ್ಲಿ ಕಿವೀಸ್ ಭಾರತದ ವಿರುದ್ಧ 26 ರನ್‌ಗಳ ಅಮೋಘ ಜಯ ಸಾಧಿಸಿ, ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಕ್ಲೀನ್‌ಸ್ವೀಪ್ ಮಾಡಿದೆ. 147 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ಆರಂಭದಲ್ಲೇ ಪ್ರಮುಖ ವಿಕೆಟ್ ಕಳೆದುಕೊಂಡು ಹಿನ್ನಡೆ ಅನುಭವಿಸಿತು. ನಾಯಕ ರೋಹಿತ್ ಶರ್ಮಾ(11), ಯಶಸ್ವಿ ಜೈಸ್ವಾಲ್(05), ಶುಭಮನ್ ಗಿಲ್(01), ವಿರಾಟ್ ಕೊಹ್ಲಿ(01) ಅಲ್ಪಮೊತ್ತಕ್ಕೆ ಔಟಾಗಿ ಪೆವಿಲಿಯನ್ ಪರೇಡ್ ನಡೆಸಿದರು. ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಅಲ್ಪಮೊತ್ತಕ್ಕೆ ಔಟಾಗಿದ್ದು ತಂಡಕ್ಕೆ ಭಾರಿ ಆಘಾತ ನೀಡಿತು.
ಪ್ರಮುಖ ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತ ತಂಡಕ್ಕೆ ಎಡಗೈ ಬ್ಯಾಟ್ಸ್ಮ್ಯಾನ್ ರಿಷಬ್ ಪಂತ್ ಕೆಲಕಾಲ ಸ್ಕ್ರೀಸ್ನಲ್ಲಿ ನಿಂತು ಭಾರತಕ್ಕೆ ಗೆಲುವಿನ ಆಸೆಯನ್ನು ಚಿಗುರಿಸಿದ್ದರು. ಆದರೆ 64 ರನ್ಗಳಿಸಿ ಆಡುತ್ತಿದ್ದ ರಿಷಬ್ ವಿಕೆಟ್ ಕೀಪರ್ಗೆ ಸುಲಭ ಕ್ಯಾಚ್ ನೀಡುವ ಮೂಲಕ ನಿರ್ಗಮಿಸಿದರು. ಇದಾದ ನಂತರ ಬಂದ ಉಳಿದ ಆಟಗಾರರು ಬಂದಷ್ಟೆ ವೇಗದಲ್ಲಿ ಮತ್ತೆ ವಾಪಾಸಾದರು.
ನ್ಯೂಜಿಲ್ಯಾಂಡ್ ಪರ ಅಜಾಜ್ ಪಟೇಲ್ 6 ವಿಕೆಟ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರ ಜೊತೆಗೆ ಗ್ಲೇನ್ ಫಿಲಿಪ್ಸ್ ಕೂಡ 3 ವಿಕೆಟ್ಗಳಿಸಿ ಮಿಂಚಿದರು. ಇದರ ಮೂಲಕ ಭಾರತ ತಂಡ ತವರಿನಲ್ಲಿ 24 ವರ್ಷದ ನಂತರ ವೈಟ್ವಾಷ್ ಆಗಿದೆ.