ಅಮೇರಿಕಾ : ಅಮೇರಿಕಾದಲ್ಲಿರುವ ಹಿಂದೂಗಳನ್ನು ಪ್ರಸಕ್ತ ಅಮೇರಿಕಾದ ಜೋ ಬೈಡೆನ್ ನೇತೃತ್ವದ ಸರ್ಕಾರ ಸಂಪೂರ್ಣ ನಿರ್ಲಕ್ಷಿಸಿದೆ. ಕಮಲಾ ಹ್ಯಾರಿಸ್ ಹಿಂದೂಗಳನ್ನು ನಿರ್ಲಕ್ಷಿಸಿದ್ದಾರೆ ಎಂದು ಅಮೇರಿಕಾದ ಮಾಜಿ ಅಧ್ಯಕ್ಷ ಹಾಗೂ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಆರೋಪಿಸಿದ್ದಾರೆ.
ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿ ಮಾತನಾಡಿದ ಡೊನಾಲ್ಡ್ ಟ್ರಂಪ್ ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ. ಇದರ ಬಗ್ಗೆ ಜೋ ಬೈಡೆನ್ ಚಕಾರವೆತ್ತಿಲ್ಲ. ಕಮಲಾ ಹ್ಯಾರಿಸ್ ಕೂಡ ಹಿಂದೂಗಳ ರಕ್ಷಣೆ ವಿಷಯದಲ್ಲಿ ಮಾತನಾಡುತ್ತಿಲ್ಲ. ಆದರೆ, ಮುಂದೆ ತಾವು ಅಮೇರಿಕಾದ ಅಧ್ಯಕ್ಷರಾದರೆ ಅಮೇರಿಕಾದಲ್ಲಿರುವ ಹಿಂದೂಗಳ ರಕ್ಷಣೆ ಮಾಡುತ್ತೇನೆ ಎಂದು ಟ್ರಂಪ್ ಹೇಳಿದ್ದಾರೆ.
ಟ್ರಂಪ್ ಅವರ ಈ ಹೇಳಿಕೆಯನ್ನು ವಿಶ್ವಹಿಂದೂ ಪರಿಷತ್ ಮುಖಂಡ ವಿನೋದ್ ಬನ್ಸಲ್ ಸ್ವಾಗತಿಸಿದ್ದಾರೆ. ಬಾಂಗ್ಲಾದೇಶದಲ್ಲಿ ದಿನೇ ದಿನೇ ಹಿಂದೂಗಳ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಇದರ ಬಗ್ಗೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಯಾವುದೇ ವಿಶ್ವನಾಯಕರು ತುಟಿಬಿಚ್ಚುತ್ತಿಲ್ಲ. ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಧಾರ್ಮಿಕ ಸ್ವಾತಂತ್ರ್ಯದ ಮೇಲಿನ ದಾಳಿ, ಹಾಗೂ ಮಾನವ ಹಕ್ಕುಗಳ ದಮನದ ಬಗ್ಗೆ ಯಾರೂ ಮಾತನಾಡದೇ ಇರುವುದು ಅವರ ಇಬ್ಬಂದಿ ತನವನ್ನು ತೋರಿಸುತ್ತದೆ. ಹಾಗಿರುವಾಗ ಡೊನಾಲ್ಡ್ ಟ್ರಂಪ್ ಹಿಂದೂಗಳ ರಕ್ಷಣೆಯ ಬಗ್ಗೆ ಭರವಸೆ ನೀಡಿರುವುದು ತಮಗೆ ಸಂತಸ ತಂದಿದೆ ಎಂದು ವಿನೋದ್ ಬನ್ಸಲ್ ಹೇಳಿದ್ದಾರೆ.