Thursday, January 23, 2025

Power tv 6th anniversary : ನಾಪಂಡ ಮುತ್ತಪ್ಪ ಅವರಿಗೆ ಕರುನಾಡ ಕಣ್ಮಣಿ ಪ್ರಶಸ್ತಿ

 

ಓಡು ಓಡು ಓಡು.. ಮಳೆ ಬಂತು ಓಡು.. ಅಗೋ ಅಲ್ಲಿ ಆನೆ ಬರ್ತಿದೆ ಓಡು… ಇಲ್ಲಿ ಜಿಂಕೆ ಬಂತು ಕಣೋ ಓಡು..  ಶಾಲೆಗೆ ತಡವಾಯ್ತು ಕಣೋ ಓಡು.. ಓಡು.. ಓಡು.. ಓಡು.. ಹೀಗೆ ನಿತ್ಯ ಶಾಲೆಗೆ ಹೋಗಿಬರಲು ಹತ್ತು ಕಿಲೋಮೀಟರ್​ ಓಡುತ್ತಲೇ ಬೆಳೆದ ಇವರು ನಾಪಂಡ ಮುತ್ತಪ್ಪ.. ಇವರು ಹೊಂದಿರುವ ಆಸ್ತಿಪಾಸ್ತಿಗೂ, ಶಾಲಾ ದಿನಗಳಲ್ಲಿ ಇವರು ಅನುಭವಿಸಿದ ಕಷ್ಟಕ್ಕೂ ಹೋಲಿಕೆಯೇ ಇಲ್ಲ.. ಯಾಕಂದ್ರೆ ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಸಿದ್ಧಲಿಂಗಪುರದ ಬಳಿ ಹೋಗಿ ನಿಂತ್ರೆ ಸಾಕು.. ಕಣ್ಣು ಹಾಯಿಸಿದಷ್ಟು ದೂರ ದೂರಕ್ಕೆ ಇವರದ್ದೇ ಜಮೀನು.. ನೂರಾರು ಎಕರೆ ಕಾಫಿ ತೋಟ.. ರಿಯಲ್​ ಎಸ್ಟೇಟ್​ ಉದ್ಯಮ.. ಮನೆಯ ತುಂಬೆಲ್ಲಾ ಕೆಲಸಕ್ಕೆ ಆಳುಗಳು. ಇವರೇನೇ ಹೇಳಿದ್ರೂ ತಕ್ಷಣ ಕೆಲಸ ಮಾಡುವ ಊರ ಜನರು. ಅಷ್ಟೆಲ್ಲಾ ಹಿರಿಮೆ ಗರಿಮೆ ಇರುವ ನಾಪಂಡ ಮುತ್ತಪ್ಪ, ಅದೆಂಥಾ ಬಿಂದಾಸ್​ ಲೈಫ್​ ಲೀಡ್​ ಮಾಡಬಹುದಲ್ವಾ.. ಆದ್ರೆ ಇವರಲ್ಲಿನ ಸಾಮಾಜಿಕ ಕಳಕಳಿ, ಮಾನವೀಯ ಗುಣ ಅದೆಲ್ಲವನ್ನೂ ಮೀರಿದ್ದು.

1990ರ ದಶಕದಲ್ಲೇ  ಬೆಂಗಳೂರಿನಲ್ಲಿ ರಿಯಲ್​ ಎಸ್ಟೇಟ್​ ವ್ಯವಹಾರ ಆರಂಭಿಸಿದ್ದ ಇವರು, ಉದ್ಯೋಗದಲ್ಲೇ ಕಳೆದು ಹೋಗಲಿಲ್ಲ. ಇವರಲ್ಲಿನ ಮನುಷ್ಯತ್ವ ಕೂಡ ಜಾಗೃತವಾಗಿತ್ತು. ಆಗಿನ ಕಾಲಕ್ಕೆ ಸಂಜೆಯಾದ್ರೆ ಮೆಜೆಸ್ಟಿಕ್​ ಸೇರಿದಂತೆ ಕೆಲ ಬೀದಿ ಬೀದಿಗಳಲ್ಲಿ ಸೆಕ್ಸ್​ ವರ್ಕರ್ಸ್​ ಬಂದು ನಿಲ್ಲುತ್ತಿದ್ದರು. ತಮ್ಮ ಉಪ ಜೀವನಕ್ಕೆ ಆ ಹೆಣ್ಣುಮಕ್ಕಳು ಕಂಡುಕೊಂಡ ದಾರಿ ಅದಾಗಿತ್ತು. ಅದನ್ನೆಲ್ಲಾ ನೋಡಿಕೊಂಡು ಮುಂದೆ ಹೆಜ್ಜೆ ಹಾಕದೇ, ಅವರ ಸಮಸ್ಯೆಗಳ ಮುಕ್ತಿಗೆ ಮುಂದಾದವರು ನಾಪಂಡ ಮುತ್ತಪ್ಪ. ಈ ಹೆಣ್ಣುಮಕ್ಕಳು ಸಹ ಗೌರವಯುತ ಜೀವನ ಸಾಗಿಸಬೇಕು ಎಂದು ಬಯಸಿ, ಅವರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಲ್ಪಿಸಲು ಮುಂದಾದರು. ಆಗ ಬಹಳಷ್ಟು ಮಹಿಳೆಯರು ಈ ದಾರಿ ತುಳಿಯಲು ಕಾರಣ ಆಗುತ್ತಿರುವುದು ಗಾರ್ಮೆಂಟ್ಸ್​ ಇಂಡಸ್ಟ್ರಿಯಲ್ಲಿ ಮಹಿಳೆಯರಿಗೆ ಆಗುತ್ತಿರುವ ಶೋಷಣೆ ಎಂಬುದು ಇವರ ಗಮನಕ್ಕೆ ಬಂದಿತ್ತು. ಬೇರು ಸಮೇತ ಈ ಕಳಂಕ ಕಿತ್ತೆಸೆಯಲು ತೀರ್ಮಾನಿಸಿ ದೊಡ್ಡ ಮಟ್ಟದಲ್ಲಿ ಗಾರ್ಮೆಂಟ್ಸ್​ ನೌಕರರ ಯೂನಿಯನ್​ ಆರಂಭಕ್ಕೆ ಇವರು ಬುನಾದಿ ಹಾಕಿದರು.

ಆಗೆಲ್ಲಾ ಗಾರ್ಮೆಂಟ್ಸ್​ಗಳಲ್ಲಿ ಉದ್ಯೋಗ ಕಾರ್ಡ್ ಇರಲಿಲ್ಲ. ವೇತನ ಬ್ಯಾಂಕ್​ ಖಾತೆಗಳಿಗೆ ಜಮೆ ಆಗುತ್ತಿರಲಿಲ್ಲ. ಕನಿಷ್ಟ ಸಂಬಳ, ಸ್ಯಾಲರಿ ಸ್ಲಿಪ್​, ಐಡಿ ಕಾರ್ಡ್​, ಯಾವುದೂ ಇರಲಿಲ್ಲ. ದಿನವಿಡೀ ದುಡಿಯುವ ಹೆಣ್ಣುಮಕ್ಕಳು ಸಂಬಳಕ್ಕಾಗಿ ಮ್ಯಾನೇಜರ್​ ಮುಂದೆ ಅಸಹಾಯಕರಂತೆ ನಿಲ್ಲಬೇಕಿತ್ತು. ಧ್ವನಿ ಎತ್ತಲು ಹಿಂಜರಿಯುತ್ತಿದ್ದ ಹೆಣ್ಣುಮಕ್ಕಳನ್ನ ಕಂಡು ಮಾತಾಡಿಸಿದರು.. ಹಾಗೆ 50 ಸಾವಿರಕ್ಕೂ ಹೆಚ್ಚು ಹೆಣ್ಣುಮಕ್ಕಳ ಸಮಸ್ಯೆ ಆಲಿಸಿರುವುದು ಇವರ ಸಾಕ್ಷಿ ಪ್ರಜ್ಞೆಗೆ ಕೈಗನ್ನಡಿ. ಆಗಿನ ಕಾಲಕ್ಕೆ 6 ಲಕ್ಷದಷ್ಟಿದ್ದ ಮಹಿಳಾ ಕಾರ್ಮಿಕರ ಸಮಸ್ಯೆಗಳ ಮುಕ್ತಿಗೆ, ಬೆಂಗಳೂರಿನಿಂದ ದೆಹಲಿಯವರೆಗೂ ಇವರು ಹೋರಾಟ ಮಾಡಿದ್ದಾರೆ. ಕನಿಷ್ಟ ವೇತನ ಜಾರಿ, ಜಾಬ್​ ಕಾರ್ಡ್​, ಸ್ಯಾಲರಿ ಸ್ಲಿಪ್​ನಂತ ಮೂಲ ಅಗತ್ಯಗಳು ಕಾರ್ಮಿಕರ ಕೈಸೇರುವಲ್ಲಿ ಇವರ ಪಾತ್ರ ಎಲೆಮರೆಯ ಕಾಯಿಯಂತಿದೆ.

ಇನ್ನು ಪಶ್ಚಿಮ ಘಟ್ಟಗಳಲ್ಲಿ ಹೆಚ್ಚಾಗುತ್ತಿರುವ ಸಮಸ್ಯೆಗಳ ಬಗ್ಗೆಯೂ ಇವರು ಗಮನಹರಿಸಿದ್ದಾರೆ. ಕಸ್ತೂರಿ ರಂಗನ್​, ಗಾಡ್ಗಿಳ್​​ ವರದಿಗಳಿಗೆ ಬಹುತೇಕ ಸ್ಥಳೀಯರ ವಿರೋಧವಿದೆ. ಆದರೆ ಭವಿಷ್ಯದ ದೃಷ್ಟಿಯಿಂದ ಅವುಗಳನ್ನು ಪರಿಗಣಿಸಿ ಜಾಗೃತರಾಗಬೇಕಿದೆ ಅನ್ನೋದು ಇವರ ಮುಕ್ತ ಅಭಿಪ್ರಾಯ. ರೆಸಾರ್ಟ್​, ಪ್ರವಾಸೋದ್ಯಮ, ಅಭಿವೃದ್ಧಿ ನೆಪದಲ್ಲಿ ಕಾಡು ನಾಶ ಮಾಡುತ್ತ ಸಾಗಿದರೆ ಜಲ ಮೂಲಗಳೆಲ್ಲಾ ನಾಶವಾಗುವ ಆತಂಕ ಇವರದ್ದು. ಅಂತಹ ಅವಾಂತರಗಳ ನಿವಾರಣೆಗಾದರೂ ರಾಜಕೀಯ ಅಧಿಕಾರ ಬೇಕು.. ಆ ಮೂಲಕ ವ್ಯವಸ್ಥೆ ಸರಿಪಡಿಸಬೇಕು ಎಂಬ ಆಶಯ ಇವರದ್ದಾಗಿದೆ. ಅಪ್ಪಟ ಜನಸೇವಕರಾಗಿರುವ ನಾಪಂಡ ಮುತ್ತಪ್ಪ ಅವರಿಗೆ ಅಧಿಕಾರ ಸಿಕ್ಕಲ್ಲಿ ಜ್ವಲಂತ ಸಮಸ್ಯೆಗಳಿಗೆ ಮುಕ್ತಿ ಸಿಗುವ ವಿಶ್ವಾಸ ಸ್ಥಳೀಯರಲ್ಲಿದೆ. ಇಂತಹ ಸಾಕ್ಷಿ ಪ್ರಜ್ಞೆಯುಳ್ಳ ಉದ್ಯಮಿ ಮತ್ತು ಸಮಾಜ ಸೇವಕರಾದ ನಾಪಂಡ ಮುತ್ತಪ್ಪ ಅವರಿಗೆ ಕರುನಾಡ ಕಣ್ಮಣಿ ಪ್ರಶಸ್ತಿ ನೀಡಿ ಗೌರವಿಸಲು ಪವರ್​ ಟಿವಿ ಅತ್ಯಂತ ಹರ್ಷ ಪಡುತ್ತದೆ.

RELATED ARTICLES

Related Articles

TRENDING ARTICLES