Friday, December 27, 2024

Power tv 6th anniversary : ಶಾಮನೂರು ಶಿವಶಂಕರಪ್ಪ ಅವರಿಗೆ ಕರುನಾಡ ಕಣ್ಮಣಿ ಪ್ರಶಸ್ತಿ

ನುಡಿದರೆ ಮುತ್ತಿನ ಹಾರದಂತಿರಬೇಕು.. ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು.. ನುಡಿದರೆ ಲಿಂಗ ಮೆಚ್ಚಿ ಅಹುದಹುದೆನ್ನಬೇಕು.. ನುಡಿಯೊಳಗಾಗಿ ನಡೆಯದಿದ್ದಡೆ ಕೂಡಲಸಂಗಮದೇವನೆಂತೊಲಿವನಯ್ಯ..

ಮಹಾ ಜ್ಞಾನಿ ಬಸವಣ್ಣ 12ನೇ ಶತಮಾನದಲ್ಲಿ ಹೀಗೆ ಮುತ್ತಿನಂತಹ ಮಾತು ಹೇಳಿದ್ದಾರೆ. ಅಂತೆಯೇ ಕಾಯಕವೇ ಕೈಲಾಸ ಎಂದು ಸಾರಿದ್ದಾರೆ. ಶರಣರ ಈ ವಾಣಿಯನ್ನು, ವಚನಗಳನ್ನು ಅಕ್ಷರಶಃ ಜೀವನದಲ್ಲಿ ಅಳವಡಿಸಿಕೊಂಡವರು.. ತಮ್ಮ ಖಡಕ್​ ಮಾತುಗಳ ಮೂಲಕವೇ ಕರುನಾಡಿನಲ್ಲಿ ಚಿರಪರಿಚಿತ ಆದವರು.. ರಾಜಕಾರಣ ಮತ್ತು ಸಾಮಾಜಿಕ ಜೀವನದ ಜೊತೆಯಲ್ಲಿ ವೀರಶೈವ ಲಿಂಗಾಯತ ಪರಂಪರೆಯ ಏಳಿಗೆಗೆ ಶ್ರಮಿಸಿದವರು.. ನಮ್ಮೆಲ್ಲರ ಮಧ್ಯೆ ತುಂಬು ಜೀವನ ಸಾಗಿಸಿರುವ ಹಿರಿಯರು.. ದಾವಣಗೆರೆ ದಕ್ಷಿಣ ಕ್ಷೇತ್ರದ ಜನಪ್ರಿಯ ಶಾಸಕರೂ ಆಗಿರುವ.. ಶ್ರೀ ಶಾಮನೂರು ಶಿವಶಂಕರಪ್ಪನವರು..

1930ರಲ್ಲಿ ಶ್ರೀಶಾಮನೂರು ಶಿವಶಂಕರಪ್ಪನವರು ದಾವಣಗೆರೆಯ ಸಾಮಾನ್ಯ ಕುಟುಂಬದಲ್ಲಿ ಜನಿಸಿದರು. ತಂದೆ ಕಲ್ಲಪ್ಪ ತಾಯಿ ಸಾವಿತ್ರಮ್ಮ. ಭಾರತದ ಸ್ವಾತಂತ್ರ್ಯಾ ನಂತರ ತಮ್ಮ 30ರ ಹರೆಯದಲ್ಲೇ ಇವರು ಸಮಾಜ ಸೇವೆಯ ತುಡಿತದೊಂದಿಗೆ ರಾಜಕೀಯ ಪ್ರವೇಶಿಸಿದರು. ನಗರಸಭೆಯಲ್ಲಿ ಕಾಂಗ್ರೆಸ್​ ಸದಸ್ಯರಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸುವ ಮೂಲಕ ವಾಣಿಜ್ಯ ನಗರಿ ದಾವಣಗೆರೆಯಲ್ಲಿ ಹೆಸರುವಾಸಿಯಾದರು. ಜೊತೆಗೆ ವೀರಶೈವ ಲಿಂಗಾಯತ ಸಮುದಾಯದ ಸಂಘಟನೆಯಲ್ಲಿ ತೊಡಗುವ ಮೂಲಕ ಇವ ನಮ್ಮವ ಇವ ನಮ್ಮವ ಎಂದು ಜನರ ಮಧ್ಯೆ ಬೆರೆತರು. ತಮಗೆ ಸಿಕ್ಕ ಅಧಿಕಾರ ಬಲದಿಂದ ಯುವ ಸಮುದಾಯದ ಅನುಕೂಲಕ್ಕಾಗಿ ಬಾಪೂಜಿ ವಿದ್ಯಾಸಂಸ್ಥೆ  ಸ್ಥಾಪಿಸಿದರು. ದಾವಣಗೆರೆ ಜಿಲ್ಲಾ ಕೇಂದ್ರ ಆಗುವ ಮೊದಲೇ ಉತ್ತರ ಕರ್ನಾಟಕದ ಉನ್ನತ ಶೈಕ್ಷಣಿಕ ಕೇಂದ್ರವಾಗಿ ಗುರುತಿಸಿಕೊಳ್ಳುವಲ್ಲಿ ಶ್ರೀಶಾಮನೂರು ಶಿವಶಂಕರಪ್ಪನವರ ಪಾತ್ರ ಶ್ಲಾಘನೀಯ. ಹಾಗೆಯೇ ಕಾಟನ್​ ಸಿಟಿ ಅಂತಾನೇ ಫೇಮಸ್ಸಾಗಿದ್ದ ನಗರದಲ್ಲಿ ಬೇರೆ ಬೇರೆ ಉದ್ಯಮಗಳನ್ನೂ ಆರಂಭಿಸಿ ಯಶಸ್ಸು  ಗಳಿಸಿದರು.

ಸಮಾಜ ನನಗೇನು ಮಾಡಿದೆ ಎಂಬುದಕ್ಕಿಂತ ಹೆಚ್ಚಾಗಿ ಸಮಾಜಕ್ಕಾಗಿ ನಾನೇನು ಮಾಡಿದ್ದೇನೆ, ಏನು ಮಾಡಬೇಕು ಎಂದು ಸದಾ ಸ್ಥಿತಪ್ರಜ್ಞರಾಗಿ ಯೋಚಿಸುತ್ತ ಬಂದವರು ಶಾಮನೂರು ಶಿವಶಂಕರಪ್ಪನವರು. ಶಾಸಕರಾಗಿ, ಸಚಿವರಾಗಿ, ಸಂಸದರಾಗಿ ದಾವಣಗೆರೆಯ ಅಭಿವೃದ್ಧಿಯಲ್ಲಿ ಇವರದ್ದು ಪ್ರಮುಖ ಪಾತ್ರ. ಜೊತೆಗೆ ಮೂರು ದಶಕಗಳ ಕಾಲ ಇವರು ಕಾಂಗ್ರೆಸ್ ಪಕ್ಷದ ಖಜಾಂಚಿಯಾಗಿ ಕಾರ್ಯಭಾರ ನಿಭಾಯಿಸಿದ್ದಾರೆ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷರಾಗಿ ಕಳೆದೊಂದು ದಶಕದಿಂದಲೂ ಸೇವೆ ಸಲ್ಲಿಸುತ್ತಿದ್ದಾರೆ.

ದಾವಣಗೆರೆಯ ದೊರೆ ಎಂದೇ ಜನಪ್ರಿಯರಾಗಿರುವ ಶಾಮನೂರು ಶಿವಂಶಕರಪ್ಪನವರಿಗೆ ಮೂವರು ಗಂಡು ಮತ್ತು ನಾಲ್ವರು ಹೆಣ್ಣು ಮಕ್ಕಳು. ಪುತ್ರ S.S. ಮಲ್ಲಿಕಾರ್ಜುನ್​ ರಾಜಕೀಯದಲ್ಲಿ ಸಕ್ರಿಯರಾಗಿದ್ದು, ಪ್ರಸ್ತುತ ಸಚಿವರಾಗಿದ್ದಾರೆ. ಅಂತೆಯೇ ಇವರ ಸೊಸೆ ಪ್ರಭಾ ಮಲ್ಲಿಕಾರ್ಜುನ ದಾವಣಗೆರೆ ಸಂಸದರಾಗಿ ಮೊದಲ ಬಾರಿ ಸಂಸತ್​ ಪ್ರವೇಶಿಸಿದ್ದಾರೆ. ತುಂಬು ಕುಟುಂಬ ಹೊಂದಿರುವ ಶಾಮನೂರು ಶಿವಶಂಕರಪ್ಪ ಅವರು 93ರ ಹರೆಯದಲ್ಲೂ ರಾಜಕೀಯ ಮತ್ತು ಸಾಮಾಜಿಕ ಜೀವನದಲ್ಲಿ ಚುರುಕಾಗಿದ್ದಾರೆ. ಇಂದಿಗೂ ಸಿಎಂ ಬದಲಾವಣೆಯ ವಿಚಾರ ಬಂದಾಗ ತಾವು ಸಹ ಆಕಾಂಕ್ಷಿ ಎಂದು ಟ್ವಿಸ್ಟ್​ ಕೊಡುತ್ತಾರೆ. ಹೀಗೆ ಮೂರು ತಲೆಮಾರಿನ ಜನರು ಇವರ ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ಜೀವನದ ಹೆಜ್ಜೆಗುರುತಿಗೆ ಸಾಕ್ಷಿಯಾಗಿದ್ದಾರೆ ಎಂಬುದೇ ಅಭಿಮಾನದ ವಿಷಯ. ಅನೇಕ ರೀತಿಯಲ್ಲಿ ಇಂದಿನ ಯುವ ಪೀಳಿಗೆಗೂ ಮಾದರಿಯಾಗಿರುವ ಈ ವಾತ್ಸಲ್ಯಮಯಿ ಹಿರಿಯರಿಗೆ ಕರುಣಾಡ ಕಣ್ಮಣಿ ಪ್ರಶಸ್ತಿ ನೀಡಿ ಗೌರವಿಸಲು ಪವರ್​ ಟಿವಿ ತುಂಬಾ ಹರ್ಷ ಪಡುತ್ತದೆ.  ಶ್ರೀಶಾಮನೂರು ಶಿವಶಂಕರಪ್ಪನವರು 100 ವರ್ಷಗಳ ಕಾಲ ತುಂಬು ಜೀವನ ಸಾಗಿಸಿ ನಮಗೆಲ್ಲಾ ಜೀವನೋತ್ಸಾಹ ತುಂಬಲಿ, ಮಾರ್ಗದರ್ಶನ ಮಾಡಲಿ ಎಂದು ಪವರ್​ ಟಿವಿ ಆಶಿಸುತ್ತದೆ.

 

RELATED ARTICLES

Related Articles

TRENDING ARTICLES