Monday, December 23, 2024

Power tv 6th anniversary : ಕೆ.ಪ್ರಕಾಶ್​ಶೆಟ್ಟಿ ಅವರಿಗೆ ಕರುನಾಡ ಕಣ್ಮಣಿ ಪ್ರಶಸ್ತಿ

ಊಟ ಬಲ್ಲವನಿಗೆ ರೋಗವಿಲ್ಲ ಎಂಬಂತೆ ದುಡಿಮೆ ಬಲ್ಲವನಿಗೆ ಬಡತನವಿಲ್ಲ ಎಂದು ಹೇಳಬಹುದು. ಇಂತಹದೊಂದು ಮಾತಿಗೆ ಸಾಕ್ಷಿಯಾಗಿದ್ದಾರೆ ಖ್ಯಾತ ಹೋಟೆಲ್​ ಉದ್ಯಮಿ, ಝೀರೋ ಟು ಹೀರೋ ಆಗಿರುವ ಕೊಡುಗೈ ದಾನಿ ಶ್ರೀಕೆ.ಪ್ರಕಾಶ್​ ಶೆಟ್ಟಿಯವರು. ಹೋಟೆಲ್ ಉದ್ಯಮ ಮತ್ತು ಸಮಾಜ ಸೇವೆಯಲ್ಲಿ ಶ್ರೀಪ್ರಕಾಶ್ ಶೆಟ್ಟಿಯವರದ್ದು ಬಹುದೊಡ್ಡ ಹೆಸರು..

ಶ್ರೀಪ್ರಕಾಶ್ ಶೆಟ್ಟಿಯವರು 1959ರಲ್ಲಿ ಉಡುಪಿ ಜಿಲ್ಲೆಯ ಕೊರಂಗ್ರಪಾಡಿ ಎಂಬಲ್ಲಿ  ಜನಿಸಿದರು. ಇರ್ವತ್ತೂರು ಹೊಸಮನೆಯ ಕೆ.ಮಾಧವ ಶೆಟ್ಟಿ ಮತ್ತು ರತ್ನಾ ಶೆಟ್ಟಿ ಇವರ ತಂದೆ, ತಾಯಿ. ಊರಲ್ಲೊಂದು ಪುಟ್ಟ ಮನೆ, ಅರ್ಧ ಎಕರೆ ಬೇಸಾಯದ ಭೂಮಿ. ಅಲ್ಲಿಯೇ ತಮ್ಮ ಬಾಲ್ಯ ಕಳೆದ ಇವರು, ಬೈಲೂರು ಮತ್ತು ‌ಉಡುಪಿಯಲ್ಲಿ ಪ್ರಾಥಮಿಕ ಹಂತದಿಂದ ಪದವಿವರೆಗೆ ಶಿಕ್ಷಣ ಪಡೆದಿದ್ರು. ಆಗ ಮನೆಯಲ್ಲಿ ಬಡತನ, ಊರಲ್ಲಿ ಕೆಲಸವಿಲ್ಲ. ಅಪ್ಪ, ಅಮ್ಮನ ಆಶೀರ್ವಾದ ಪಡೆದು ಕನಸು ಕಂಗಳೊಂದಿಗೆ ಕೆಂಪು ಬಸ್​ ಹತ್ತಿ ಬೆಂಗಳೂರಿಗೆ ಬಂದಿದ್ರು. ರಾಜಧಾನಿಯಲ್ಲಿ ಸಿಕ್ಕಸಿಕ್ಕ ಕೆಲಸಗಳನ್ನೆಲ್ಲಾ ಮಾಡಿ, ಹೊಟ್ಟೆ ಬಟ್ಟೆ ಕಟ್ಟಿ ಬೆಂಗಳೂರಿನ ಬದುಕನ್ನು ಅರ್ಥ ಮಾಡಿಕೊಂಡಿದ್ರು. ಕೆಲ ವರ್ಷದ ಬಳಿಕ ಸ್ಟೇಟ್​ ಬ್ಯಾಂಕ್​​ನಲ್ಲಿ ಸಾಲ ಪಡೆದು ಗೌರವ್​ ಪ್ರಿಂಟಿಂಗ್​ ಪ್ರೆಸ್​ ಆರಂಭಿಸಿದ್ರು. ಉತ್ತಮ ಗುಣಮಟ್ಟದ ಕೆಲಸ, ನಿರಂತರ ಶ್ರಮದಿಂದ ಪ್ರೆಸ್​ ಇವರ ಕೈಹಿಡಿದಿತ್ತು. ಬಳಿಕ ಹೋಟೆಲ್​ ಆರಂಭಿಸಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ರು. ಆರಂಭದ ದಿನಗಳಲ್ಲಿ ಒಂದಿಷ್ಟು ಕ್ಯಾಟರಿಂಗ್​ ಕಾಂಟ್ರ್ಯಾಕ್ಟ್​ ಲಭಿಸಿದವು. ಶ್ರದ್ಧೆಯಿಂದ ಕೆಲಸ ಮಾಡಿ ಗುಣಮಟ್ಟ ಕಾಪಾಡಿದ್ದರಿಂದ ಗ್ರಾಹಕರ ಮನಸು ಗೆಲ್ಲುವುದು ತಡವಾಗಲಿಲ್ಲ. ಜೆ. ಎಚ್. ಪಟೇಲರು ಸಿಎಂ ಆಗಿದ್ದ ವೇಳೆ ನಡೆದ ಅಖಿಲ ಭಾರತ ಮಟ್ಟದ ಕ್ರೀಡಾಕೂಟದಲ್ಲಿ ಅತ್ಯುತ್ತಮ ಊಟೋಪಚಾರದ ವ್ಯವಸ್ಥೆ ಮಾಡಿದ್ದು ಉದ್ಯಮದ ವಿಸ್ತರಣೆಗೆ ಸಹಕಾರಿಯಾಗಿತ್ತು. ಹಂತ ಹಂತವಾಗಿ ಬೆಂಗಳೂರಲ್ಲಿ ಪ್ರಸಿದ್ಧಿ ಪಡೆಯುವಂತೆ ಹೋಟೆಲ್​ ಸ್ಥಾಪಿಸುವಲ್ಲಿ ಶ್ರೀಪ್ರಕಾಶ್ ಶೆಟ್ಟಿಯವರು ಯಶಸ್ವಿಯಾದರು.

ಉದ್ಯಮದಲ್ಲಿ ಯಶಸ್ಸು ಸಿಕ್ಕ ಬಳಿಕ ಅಸಹಾಯಕರು ಮತ್ತು ಅಗತ್ಯ ಇರುವ ಜನರಿಗೆ ತಮ್ಮ ಕೈಲಾದ ಸಹಾಯ ಮಾಡುತ್ತಾ ಬಂದಿದ್ದಾರೆ. ಕೊರೋನಾ ಕಷ್ಟ ಕಾಲದಲ್ಲಿ 20 ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಇವರು ಅನ್ನ ನೀಡಿ ನೆರವಾಗಿದ್ದಾರೆ. 2023 ರಲ್ಲಿ ಒಟ್ಟು 1828 ಜನರಿಗೆ 4 ಕೋಟಿ ರೂಪಾಯಿಗಳ ಚೆಕ್​ಗಳನ್ನು ಶೈಕ್ಷಣಿಕ, ಆರೋಗ್ಯ ಸೇರಿದಂತೆ ವಿವಿಧ ಸಹಾಯಾರ್ಥ ನೀಡಿದ್ದಾರೆ. ಅದರ ಜೊತೆಗೆ ಪ್ರತಿ ವರ್ಷ ಆಶಾ ಪ್ರಕಾಶ್ ಶೆಟ್ಟಿ ಸಹಾಯಹಸ್ತ ಯೋಜನೆ ಮೂಲಕ ಸಾವಿರಾರು ಜನರಿಗೆ ನೆರವಾಗುತ್ತಿದ್ದಾರೆ. ಅಂತೆಯೇ ಮಂಗಳೂರಿನ ಗೋಲ್ಡ್​ ಫಿಂಚ್ ಸಿಟಿಯಲ್ಲಿ ಐಟಿ ಪಾರ್ಕ್ ಸ್ಥಾಪಿಸಿ 50 ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಸುವ ಕನಸು ಕಂಡಿದ್ದಾರೆ.

ಸದ್ಯ ಬಂಜಾರ ಪ್ರಕಾಶಣ್ಣ ಎಂದೇ ಗುರ್ತಿಸಿಕೊಂಡಿರುವ ಅಜಾತಶತ್ರು ಪ್ರಕಾಶ್ ಶೆಟ್ಟಿಯವರು ಹತ್ತಾರು ಉದ್ಯಮಗಳ, ಸಂಸ್ಥೆಗಳ ನಿರ್ದೇಶಕರಾಗಿದ್ದಾರೆ. ಸಮಾಜಮುಖಿ ಬದುಕು ಸಾಗಿಸುತ್ತಿರುವ ಇವರ ಹೆಸರು ಜಗದಗಲ ಹಬ್ಬಿದೆ. ಇವರ ಸಮಾಜ ಸೇವೆ ಗುರುತಿಸಿ ಕರ್ನಾಟಕ ಸರ್ಕಾರವೂ ಪ್ರಶಸ್ತಿ ನೀಡಿ ಗೌರವಿಸಿದೆ. ಸಾಧನೆಯ ಹಾದಿಯಲ್ಲಿ ಪತ್ನಿ ಆಶಾ ಪ್ರಕಾಶ್ ಶೆಟ್ಟಿ, ಮಗ ಗೌರವ್ ಶೆಟ್ಟಿ ಹಾಗೂ ಸಮಸ್ತ ಕುಟುಂಬ ಬೆಂಬಲವಾಗಿ ನಿಂತಿದೆ. ಶ್ರೀಕೆ.ಪ್ರಕಾಶ್ ಶೆಟ್ಟಿಯವರಿಗೆ ಕರುನಾಡ ಕಣ್ಮಣಿ ಪ್ರಶಸ್ತಿ ನೀಡಲು ಪವರ್​ ಟಿವಿ ಅತ್ಯಂತ ಹರ್ಷ ಪಡುತ್ತದೆ.

RELATED ARTICLES

Related Articles

TRENDING ARTICLES