Monday, December 23, 2024

Power tv 6th anniversary : ಡಾ.ದೇವಿಪ್ರಸಾದ್ ಶೆಟ್ಟಿ ಅವರಿಗೆ ಕರುನಾಡ ಕಣ್ಮಣಿ ಪ್ರಶಸ್ತಿ

ಡಾ. ದೇವಿಪ್ರಸಾದ್ ಶೆಟ್ಟಿ. ಈ ಹೆಸರು ಎಲ್ಲರ ಹೃದಯಕ್ಕೂ ಕೇಳುತ್ತದೆ. ಇವರ ಮಾತನ್ನು ಎಲ್ಲರ ಹೃದಯಗಳೂ ಪಾಲಿಸುತ್ತವೆ. ಅಷ್ಟರಮಟ್ಟಿಗೆ ಇವರು ಆಧುನಿಕ ವೈದ್ಯಕೀಯ ಜಗತ್ತಿನ ಪವಾಡ ಪುರುಷ ಎಂದರೆ ತಪ್ಪಾಗಲಾರದು. ನಾರಾಯಣ ಹೆಲ್ತ್​ ಕೇರ್​​ ಸಂಸ್ಥಾಪಕ ಅಧ್ಯಕ್ಷರಾಗಿ, ಹೃದಯ ಶಸ್ತ್ರ ಚಿಕಿತ್ಸಾ ತಜ್ಞರಾಗಿ ಇವರು ಮಾಡಿರುವ ಸಾಧನೆ ಜಗದಗಲ ಪ್ರಖ್ಯಾತಿ ಪಡೆದಿದೆ.

ಇವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಕಿನ್ನಿಗೋಳಿ ನಿವಾಸಿ. ಇವರ ತಾಯಿ ದುರ್ಗಾಪರಮೇಶ್ವರಿಯ ಪರಮ ಭಕ್ತರಾಗಿದ್ರು. ಆ ದೇವಿಯ ಕರುಣೆ ಸದಾ ಮಗನ ಮೇಲಿರಲಿ ಎಂದು ‘ದೇವಿ ಪ್ರಸಾದ’ ಎಂದು ಹೆಸರಿಟ್ಟಿದ್ದರಂತೆ. ಆ ತಾಯಿಯ ಆಶೀರ್ವಾದವೋ, ದೇವಿಯ ಆಶೀರ್ವಾದವೋ ಗೊತ್ತಿಲ್ಲ. ವಿದ್ಯಾರ್ಥಿ ದೆಸೆಯಲ್ಲೇ ಹೃದಯ ಶಸ್ತ್ರ ಕಸಿ ಬಗ್ಗೆ ಇವರು ಓದಿ ತಿಳಿದುಕೊಂಡಿದ್ರು. ಆಗಲೇ ಹೃದಯ ತಜ್ಞರಾಗಲು ನಿರ್ಧರಿಸಿದ್ದರು. ಆ ನಂತರದಲ್ಲಿ ಮಣಿಪಾಲದ ಕಸ್ತೂರಬಾ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಮತ್ತು ಎಂಎಸ್ ಉನ್ನತ ಶಿಕ್ಷಣ ಪಡೆದಿದ್ದರು. ಬಳಿಕ ಇಂಗ್ಲೆಂಡ್​​ನ ರಾಯಲ್ ಕಾಲೇಜ್ ಆಫ್ ಸರ್ಜನ್ಸ್​​ನಲ್ಲಿ ಎಫ್​ಆರ್​ಸಿಎಸ್ ಪಡೆದರು. ಲಂಡನ್, ಅಮೆರಿಕದಲ್ಲೂ ಹೃದಯ ಶಸ್ತ್ರ ಚಿಕಿತ್ಸಕರಾಗಿ ಉತ್ತಮ ಅನುಭವ ಪಡೆದುಕೊಂಡರು. 1984ರಲ್ಲಿ ಮದರ್ ಥೆರೇಸಾ ಅವರಿಗೆ ಹೃದಯಾಘಾತದ ಬಳಿಕ, 5 ವರ್ಷಗಳ ಕಾಲ ಅವರಿಗೆ ಆಪ್ತ ವೈದ್ಯರಾಗಿ ಸೇವೆ ಸಲ್ಲಿಸಿದ್ದರು.

2001ರಲ್ಲಿ ಡಾ. ದೇವಿಪ್ರಸಾದ್ ಶೆಟ್ಟಿ ಅವರು ಬೆಂಗಳೂರಿನಲ್ಲಿ ನಾರಾಯಣ ಹೃದಯಾಲಯ ಸ್ಥಾಪಿಸಿದ್ದರು. ನಂತರ ಅದು ನಾರಾಯಣ ಹೆಲ್ತ್ ಕೇರ್ ಆಗಿ ಮಾರ್ಪಟ್ಟಿತ್ತು. ಸದ್ಯ ದೇಶಾದ್ಯಂತ 47 ಕೇಂದ್ರಗಳನ್ನು ಹೊಂದಿರುವ ಈ ಸಂಸ್ಥೆ, ಭಾರತದ ಅತಿದೊಡ್ಡ ವೈದ್ಯಕೀಯ ಸಂಸ್ಥೆಗಳಲ್ಲೊಂದು. ವಿದೇಶಕ್ಕಿಂತ ಕಡಿಮೆ ವೆಚ್ಚದಲ್ಲಿ ಅತ್ಯಂತ ಕ್ಲಿಷ್ಟಕರ ಹೃದಯ ಚಿಕಿತ್ಸೆಯನ್ನು ಇಲ್ಲಿ ನೀಡಲಾಗುತ್ತಿದೆ. ಆಸ್ಪತ್ರೆಯ ಆರಂಭಿಕ ವರ್ಷದಲ್ಲೇ ಪಾಕಿಸ್ತಾನದ ಪುಟಾಣಿ ಮಗು ನೂರ್ ಫಾತಿಮಾಗೆ ಶಸ್ತ್ರಚಿಕಿತ್ಸೆ ಮಾಡಿ ಜೀವದಾನ ನೀಡಿದ್ರು. ಕಾರ್ಗಿಲ್​ ಯುದ್ಧದ ಬಳಿಕ ಪಾಕ್​ ಮಗುವಿಗೆ ನೀಡಿದ್ದ ಪುನರ್ಜನ್ಮ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿತ್ತು.

ಪ್ರಸ್ತುತ ವಿಶ್ವದ ಅತ್ಯುತ್ತಮ ಹೃದಯ ತಜ್ಞರಲ್ಲಿ ಒಬ್ಬರು ಎಂದು ಡಾ.ದೇವಿಶೆಟ್ಟಿಯವರು ಗುರುತಿಸಲ್ಪಟ್ಟಿದ್ದಾರೆ. ಜೊತೆಗೆ ಸಮಾಜಕ್ಕೂ ತಮ್ಮ ಸಂಸ್ಥೆಯ ಮೂಲಕ ಅನೇಕ ಕೊಡುಗೆ ನೀಡಿದ್ದಾರೆ. ಬದಲಾದ ದಿನಗಳಲ್ಲಿ ರಾಜ್ಯ ಸರ್ಕಾರದ ಯಶಸ್ವಿನಿ ಯೋಜನೆ ರೂಪರೇಷೆಯಲ್ಲಿ ಇವರೇ ಅಗ್ರಗಣ್ಯರು. ಕೊರೋನಾ ದಿನಗಳಲ್ಲಿ ಇವರ ನೇತೃತ್ವದಲ್ಲೇ ರಾಜ್ಯ ಸರ್ಕಾರ ಸಮಿತಿ ರಚಿಸಿತ್ತು. ಆ ಸಮಿತಿ ನೀಡಿದ ಸಲಹೆಗಳು ಜನರ ಪಾಲಿಗೆ ಚಿರಂಜೀವಿಯಾಗಿದ್ದು ಪರಮ ಸತ್ಯವಾಗಿದೆ.

ಡಾ.ದೇವಿಶೆಟ್ಟಿಯವರ ಸಾಮಾಜಿಕ ಕಳಕಳಿ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿನ ಕೊಡುಗೆ ಅನನ್ಯ.  ಅದನ್ನು ಪರಿಗಣಿಸಿ 2004ರಲ್ಲಿ ಪದ್ಮಶ್ರೀ, 2012ರಲ್ಲಿ ಪದ್ಮಭೂಷಣ, ರಾಜ್ಯ ಸರ್ಕಾರದಿಂದ ಕರ್ನಾಟಕ ರತ್ನ ಸೇರಿ ಹಲವು ಪ್ರಶಸ್ತಿ ಪುರಸ್ಕಾರಗಳು ಇವರಿಗೆ ಸಂದಿವೆ. ದೇಶ ವಿದೇಶದಲ್ಲಿ ಹಲವು ಸಂಘ ಸಂಸ್ಥೆಗಳ ಫೆಲೋಶಿಪ್​ ಮತ್ತು ಗೌರವಾದರಗಳಿಗೆ ಇವರು ಪಾತ್ರರಾಗಿದ್ದಾರೆ. ಸರಳ ಸಹೃದಯಿ ಆಗಿರುವ ಡಾ.ದೇವಿಪ್ರಸಾದ್ ಶೆಟ್ಟಿಯವರಿಗೆ ಕರುನಾಡ ಕಣ್ಮಣಿ ಪ್ರಶಸ್ತಿ ನೀಡಲು ಪವರ್​ ಟಿವಿ ಅತ್ಯಂತ ಹರ್ಷ ಪಡುತ್ತದೆ.

 

RELATED ARTICLES

Related Articles

TRENDING ARTICLES