Thursday, January 23, 2025

Power tv 6th anniversary : ಆಸ್ಮಾರವರಿಗೆ ಕರುನಾಡ ಕಣ್ಮಣಿ ಪ್ರಶಸ್ತಿ

UDP PADDY SEEDS

THE PERFECT WOMEN YOU SEE IS A WORKING WOMEN.. NOT AN IDLER, NOT A FINE LADY, BUT ONE WHO USES HER HANDS AND HER HEAD AND HER HEART FOR THE GOOD OF OTHERS..

ಈ ಮಾತಿನ ತಾತ್ಪರ್ಯವಿಷ್ಟೆ.. ಒಬ್ಬ ಪರಿಪೂರ್ಣ ಮಹಿಳೆಯನ್ನು ಬಿಡುವಿಲ್ಲದೆ ಕೆಲಸ ಮಾಡುವ ಮಹಿಳೆಯಲ್ಲಿ ಮಾತ್ರ ಕಾಣಲು ಸಾಧ್ಯ. ಆಲಸ್ಯದಿಂದಿರುವ ಅಥವಾ ಸುಂದರ ಮಹಿಳೆಯರಲ್ಲಿ ಅಲ್ಲ.. ಬೇರೆಲ್ಲಾ ಜನರಿಗೆ ಒಳಿತನ್ನು ಮಾಡಲು ಆಕೆ ಕೆಲಸ ಮಾಡುತ್ತಾಳೆ.. ಯೋಚಿಸುತ್ತಾಳೆ.. ಮತ್ತು ಹೃದಯ ಪೂರ್ವಕವಾಗಿ ಒಳಿತನ್ನು ಬಯಸುತ್ತಾಳೆ. ಅಂತಹ ಅನೇಕ ಮಹಿಳೆಯರು ನಮ್ಮ ನಿಮ್ಮ ನಡುವೆ ಇದ್ದಾರೆ. ಅಂಥವರ ಪೈಕಿ ಮಾದರಿಯಾಗಿದ್ದಾರೆ ಉಡುಪಿ ಜಿಲ್ಲೆ ಕಾರ್ಕಳ ತಾಲ್ಲೂಕಿನ ಸಾಣೂರು ನಿವಾಸಿ ಆಸ್ಮಾ.

ವೃತ್ತಿಯಿಂದ ಇವರು ಶಿಕ್ಷಕಿ.. ಪ್ರವೃತ್ತಿಯಿಂದ ಭೂ ತಾಯಿ ಸೇವಕಿ.. ಬಹಳಷ್ಟು ಜನರು ಕೃಷಿಯಿಂದ ವಿಮುಖರಾಗುತ್ತಿರುವ ದಿನಗಳಲ್ಲಿ ಇವರು ಕಮಾಲ್​ ಮಾಡಿದ್ದಾರೆ. ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ನಶಿಸಿ ಹೋಗುತ್ತಿರುವ ಭತ್ತದ ತಳಿಗಳನ್ನು ಇವರು ಪೋಷಿಸಿದ್ದಾರೆ. 1,500ಕ್ಕೂ ಹೆಚ್ಚು ತಳಿಗಳ ಭತ್ತ ನೆಡುವ ಮೂಲಕ ವಿನೂತನ ಪ್ರಯೋಗ ನಡೆಸಿದ್ದಾರೆ. ಭತ್ತದ ಬೀಜ ತಂದು ಪ್ರತ್ಯೇಕವಾಗಿ ಹೂವಿನ ಕುಂಡಗಳಲ್ಲಿ ಬಿತ್ತನೆ ಮಾಡಿದ್ದಾರೆ. ಆಯಾ ತಳಿಯ ಹೆಸರನ್ನು ಬರೆದಿಟ್ಟಿದ್ದಾರೆ. ಬೀಜಗಳನ್ನು ಹೆಚ್ಚಿಸಿ ದಾಸ್ತಾನು ಮಾಡಿಡುವ ಯೋಜನೆ ಇವರದ್ದು. ಒಂದೇ ಕಡೆಯಲ್ಲಿ ನಾಗಸಂಪಿಗೆ, ಸರಸ್ವತಿ, ಸಹ್ಯಾದ್ರಿ, ಚಂಪಕ, ರಾಜಮುಡಿ, ಕಡಲ ಚಂಪ, ಸಿಂಧೂರು, ಮಧು ಸಲೈ, ರತ್ನಚೂರಿ, ದೆಹಲಿ ಬಾಸ್ಮತಿ, ಜೀರಿಗೆ, ಕರಿಕಗ್ಗ, ಬಿಳಿ ಮುದಿಗ.. ಹೀಗೆ ಒಂದೂವರೆ ಸಾವಿರಕ್ಕೂ ಹೆಚ್ಚು ತಳಿಗಳ ಭತ್ತ ಬೆಳೆದು ಅಚ್ಚರಿ ಮೂಡಿಸಿದ್ದಾರೆ.

ಆಸ್ಮಾ ಅವರ ಈ ಕಾರ್ಯಕ್ಕೆ ಪ್ರೇರಣೆ ಆದವರೇ ಪತಿ ಅಬೂಬಕ್ಕರ್​. ಕಾರ್ಕಳದ ಹೊಟೇಲ್ ಸಾಗರ್‌ನಲ್ಲಿ ಇವರು ಮ್ಯಾನೇಜರ್. ಸಾವಯವ ಕೃಷಿಯಲ್ಲಿ ಇವರಿಗೆ ವಿಶೇಷ ಆಸಕ್ತಿ ಇತ್ತು. ಪಾಳು ಬಿದ್ದ ಗದ್ದೆ ಸಾಗುವಳಿ ಮಾಡಿ ಸೈ ಎನಿಸಿಕೊಂಡವರು. ಒಂದೇ ಗದ್ದೆಯಲ್ಲಿ ೧೦೫ ತಳಿಯ ಭತ್ತದ ಕೃಷಿ ಮಾಡಿ, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಹಿಂದಿನ ಕಾಲದಲ್ಲಿ ಬಳಕೆಯಾಗುತ್ತಿದ್ದ ವಿವಿಧ ಭತ್ತದ ತಳಿಗಳನ್ನು ಕಾಪಿಡುವ ಪ್ರಯತ್ನದ ಜೊತೆಗೆ, ಅವುಗಳನ್ನು ಉಳಿಸಿ ಸಂರಕ್ಷಿಸುವ ಪ್ರಯತ್ನದಲ್ಲಿ ಯಶಸ್ಸು ಕಂಡವರು. ಆದರೆ ಕಳೆದ ವರ್ಷ ಬಾರಾಡಿಯಲ್ಲಿ ನಡೆಸಿದ ಭತ್ತದ ಕೃಷಿ ಕೈಕೊಟ್ಟ ಪರಿಣಾಮ ನಿರಾಶರಾಗಿದ್ದರು. ಅದನ್ನು ಗಮನಿಸಿದ ಪತ್ನಿ ಆಸ್ಮಾ ಈ ವಿಶೇಷ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಪತಿಯ ಪ್ರೇರಣೆಯಿಂದ ಈ ತಳಿಗಳ ಸಂರಕ್ಷಣೆಗಾಗಿ ಯೋಜನೆ ರೂಪಿಸಿ ಯಶಸ್ಸು ಕಂಡಿದ್ದಾರೆ. ತಮ್ಮ ಈ ಪುಟ್ಟ ಪ್ರಯತ್ನ ಅನ್ನದಾತರಿಗೆ ವರದಾನ ಆಗಬೇಕು ಎಂಬುದು ಇವರ ಆಶಯ. ಅದಕ್ಕಾಗಿ ಭತ್ತದ ತಳಿಗಳನ್ನು ಮುಂಬರುವ ದಿನಗಳಲ್ಲಿ ಎಲ್ಲರಿಗೂ ಪರಿಚಯಿಸುವ ಯೋಜನೆ ಇವರದ್ದಾಗಿದೆ. ಜೊತೆಗೆ ಶಾಲೆಯಲ್ಲಿ ಪಾಠದ ಮೂಲಕವೂ ಇವರು ನೂರಾರು ಮಕ್ಕಳಿಗೆ ಪ್ರೀತಿಪಾತ್ರರಾಗಿದ್ದಾರೆ. ಶ್ರೀಮತಿ ಆಸ್ಮಾ ಅವರಿಗೆ ಕರುನಾಡ ಕಣ್ಮಣಿ ಪ್ರಶಸ್ತಿಯನ್ನು ನೀಡಲು ಪವರ್​ ಟಿವಿ ಅತ್ಯಂತ ಹರ್ಷ ಪಡುತ್ತದೆ.

RELATED ARTICLES

Related Articles

TRENDING ARTICLES