Sunday, September 8, 2024

ಡೈರೆಕ್ಟರ್ ಕತ್ತು ಕೊಯ್ತಾ ಬ್ಲೇಡ್? ಆ ಅಪವಾದ ಎಷ್ಟು ನಿಜ?: ಮೃತ ವಿನೋದ್ ಗುರು ಪಿ. ಶೇಷಾದ್ರಿ ಅಚ್ಚರಿಯ ಹೇಳಿಕೆ

ಎರಡ್ಮೂರು ಸೀರಿಯಲ್​​ ಹಾಗೂ ಸಿನಿಮಾವೊಂದನ್ನ ನಿರ್ದೇಶಿಸುತ್ತಿದ್ದ ಪ್ರತಿಭಾವಂತ ನಿರ್ದೇಶಕ ವಿನೋದ್ ದಾಂಡೋಳೆ ಆತ್ಮಹತ್ಯೆ ಮಾಡಿಕೊಂಡು, ಬಾರದೂರಿಗೆ ಪಯಣ ಬೆಳೆಸಿದ್ದಾರೆ. ಆದ್ರೀಗ ಸೋಶಿಯಲ್ ಮೀಡಿಯಾದಲ್ಲಿ ಅಶೋಕ ಬ್ಲೇಡ್ ಸಿನಿಮಾನೇ ಅವ್ರ ಕತ್ತು ಕೊಯ್ತು ಅನ್ನೋ ಅಲೆ ಎದ್ದಿದೆ. ಮೃತ ವಿನೋದ್​ರ ಗುರುಗಳಾದ ಪಿ.ಶೇಷಾದ್ರಿ ಕೂಡ ಈ ಬಗ್ಗೆ ಧ್ವನಿ ಎತ್ತಿದ್ದಾರೆ. ಆದ್ರೆ ಯಾರಿಗೂ ತಿಳಿಯದ ಅಸಲಿ ಕಥೆ ಇಲ್ಲಿದೆ.

ಕನ್ನಡಕ್ಕೆ ಸಾಲು ಸಾಲು ನ್ಯಾಷನಲ್ ಅವಾರ್ಡ್​ಗಳನ್ನ ತಂದುಕೊಟ್ಟಿರೋ ಖ್ಯಾತ ನಿರ್ದೇಶಕ ಪಿ.ಶೇಷಾದ್ರಿ ಹಾಗೂ ಕಿರುತೆರೆ ಲೋಕದ ಲೆಜೆಂಡರಿ ಡೈರೆಕ್ಟರ್ ಟಿ.ಎನ್. ಸೀತಾರಾಂ ಅಂತಹ ದಿಗ್ಗಜರ ಗರಡಿಯಲ್ಲಿ ಪಳಗಿದ ಪ್ರತಿಭೆ ಮೃತ ವಿನೋದ್ ದಾಂಡೋಳೆ. ಪತ್ನಿ, ಮೂವರು ಮಕ್ಕಳನ್ನ ಕೂಡ ಲೆಕ್ಕಿಸದೆ ಆರ್ಥಿಕ ಸಂಕಷ್ಟದಿಂದ ನೇಣಿಗೆ ಶರಣಾಗಿ ಕಿರುತೆರೆ ಹಾಗೂ ಬೆಳ್ಳಿತೆರೆಗೆ ಆಘಾತಕಾರಿ ಸುದ್ದಿ ನೀಡಿದರು.

ಕರಿಮಣಿ, ಗಂಗೆ ಗೌರಿ, ಶಾಂತಂ ಪಾಪಂ ಅಂತಹ ಸಕ್ಸಸ್​​ಫುಲ್ ಸೀರಿಯಲ್​​ಗಳ ನಿರ್ದೇಶಕರಾಗಿದ್ದ ವಿನೋದ್, ಸಿನಿಮಾರಂಗಕ್ಕೂ ಕಾಲಿಟ್ಟಿದ್ದರು. ಗೆಳೆಯ ವರ್ಧನ್ ಜೊತೆಗೂಡಿ ನಟ ನೀನಾಸಂ ಸತೀಶ್ ಜೊತೆ ಅಶೋಕ ಬ್ಲೇಡ್ ಅನ್ನೋ ಸಿನಿಮಾ ಡೈರೆಕ್ಟ್ ಮಾಡ್ತಿದ್ರು. ಜೊತೆಗೆ ನಿರ್ಮಾಣಕ್ಕೂ ಕೈ ಹಾಕಿದ್ರು. ಅದಕ್ಕೆ ಸ್ವತಃ ಅವರ ಗುರುಗಳಾದ ಪಿ.ಶೇಷಾದ್ರಿ ಹಾಗೂ ಟಿ.ಎನ್. ಸೀತಾರಾಂ ಅವರೇ ಬಂದು ಕ್ಲಾಪ್ ಮಾಡಿದ್ರು. ಆ ಸಿನಿಮಾ ಶುರುವಾಗಿ ಎರಡು ವರ್ಷಗಳಾದ್ರೂ ಕಂಪ್ಲೀಟ್ ಆಗಿರಲಿಲ್ಲ. ಕೊನೆಯ ಹಂತದ ಶೂಟಿಂಗ್ ಕೂಡ ಬಾಕಿಯಿತ್ತು.

ಇದನ್ನೂ ಓದಿ: ಕನ್ನಡಿಗರ ಸ್ವಾಭಿಮಾನವೇ ಮುಖ್ಯ ಅಂದ ಅಭಿನಯ ಚಕ್ರವರ್ತಿ: ಫೋನ್ ಪೇ ರಾಯಭಾರತ್ವದಿಂದ ಹೊರ ಬರ್ತಾರ ಕಿಚ್ಚ?

ಮೊನ್ನೆಯಷ್ಟೇ ಚಿತ್ರತಂಡದ ಜೊತೆ ಲಾಸ್ಟ್ ಶೆಡ್ಯೂಲ್ ಬಗ್ಗೆ ಚರ್ಚಿಸಿದ್ದ ವಿನೋದ್, ದಿಢೀರ್ ಅಂತ ಮನೆಯಲ್ಲೇ ನೇಣು ಬಿಗಿದುಕೊಂಡು ಬಾರದೂರಿಗೆ ಪಯಣ ಬೆಳೆಸಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಒಂದಷ್ಟು ಚರ್ಚೆಗೆ ಗ್ರಾಸವಾಗಿದೆ. ವಿನೋದ್ ಸಾಲಗಾರನಾಗಿದ್ದೇ ಸಾವಿಗೆ ಕಾರಣ ಅಂತಿದ್ದಾರೆ. ಸಿನಿಮಾ ಪ್ರಕ್ರಿಯೆಯಲ್ಲಿ ‘ಅನಗತ್ಯ’ ಖರ್ಚುಗಳನ್ನು ಮಾಡಿಸುವ, ಅನಗತ್ಯವಾಗಿ ಸಿನಿಮಾದ ಪ್ರಕ್ರಿಯೆಗಳನ್ನು ತಡಮಾಡುವ ಪ್ರತಿಯೊಬ್ಬನಿಗೂ ತಾವು ಅನ್ನದಾತನ ರಕ್ತ ಹೀರುತ್ತಿದ್ದೇವೆ, ಅವರ ಜೀವ ಹಿಂಡುತ್ತಿದ್ದೇವೆ ಎಂಬ ಅರಿವಾಗಬೇಕು.. ಪಾಪಪ್ರಜ್ಞೆ ಕಾಡಬೇಕು ಅನ್ನೋ ಬರಹಗಳು ವೈರಲ್ ಆಗ್ತಿವೆ. ಇದಕ್ಕೆ ಪಿ ಶೇಷಾದ್ರಿ ಕೂಡ ಧ್ವನಿಗೂಡಿಸಿದ್ದಾರೆ.

ಹೌದು.. ಪ್ಯಾನ್ ಇಂಡಿಯಾ ಕಾನ್ಸೆಪ್ಟ್​​​ನ ವ್ಯಾಮೋಹಕ್ಕೆ ಎಲ್ರೂ ಒಳಗಾಗ್ತಿರೋದು ಅಕ್ಷರಶಃ ಸತ್ಯ. ಆದ್ರೆ ವಿನೋದ್​ಗೆ ಪ್ರೊಡಕ್ಷನ್ ಆಗಲಿ, ಮೇಕಿಂಗ್ ಆಗಲಿ ಹೊಸತೇನಲ್ಲ. ತನ್ನ ಸಿನಿಮಾ ಚೆನ್ನಾಗಿ ಆಗಬೇಕು ಅನ್ನೋ ತುಡಿತ ಅವರಲ್ಲೂ ಇತ್ತು. ಸಾಲ ಜಾಸ್ತಿ ಆದ್ರೆ ರಿಲೀಸ್ ಬಳಿಕ ರಿಕವರ್ ಮಾಡಬಲ್ಲೆ ಅನ್ನೋ ಆತ್ಮವಿಶ್ವಾಸ ಅವರಲ್ಲಿ ಇರಲಿಲ್ಲ. ಅದೇ ಅವರ ಜೀವಕ್ಕೆ ಕುತ್ತು ತಂದಿದೆ. ಆದ್ರೆ ನಾಯಕನಟ ನೀನಾಸಂ ಸತೀಶ್ ಮೇಲೆ ಒಂದಷ್ಟು ಮಂದಿ ಪರೋಕ್ಷವಾಗಿ ಆರೋಪ ಮಾಡ್ತಿದ್ದಾರೆ.

ಅಸಲಿ ಸತ್ಯ ಏನಪ್ಪಾ ಅಂದ್ರೆ ಅಶೋಕ ಬ್ಲೇಡ್ ಚಿತ್ರಕ್ಕೆ ನಟ ನೀನಾಸಂ ಸತೀಶ್ ಒಂದು ಪೈಸೆ ಕೂಡ ರೆಮ್ಯುನರೇಷನ್ ಪಡೆದಿಲ್ಲ. ಒಂದೂವರೆ ಎರಡು ವರ್ಷಗಳಿಂದ ಬೇರಾವ ಸಿನಿಮಾದಲ್ಲೂ ತೊಡಗಿಸಿಕೊಂಡಿಲ್ಲ. ಅಯೋಗ್ಯ-2 ಶೂಟಿಂಗ್​ ಕೂಡ ಪೋಸ್ಟ್​ಪೋನ್ ಮಾಡಿಕೊಂಡು, ಈ ಸಿನಿಮಾಗಾಗಿ ತನು, ಮನ, ಧನವನ್ನು ಅರ್ಪಿಸಿದ್ದರು. ಕಾರಣ ಟಿಕೆ ದಯಾನಂದ್ ಅವರ ಕಥೆ, ವಿನೋದ್ ಅವ್ರ ನಿರ್ದೇಶನ ಹಾಗೂ ವರ್ಧನ್ ನಿರ್ಮಾಣದ ಮೇಲೆ ಇದ್ದಂತಹ ಭರವಸೆ. ಅಷ್ಟೇ ಅಲ್ಲ, ಆರ್ಥಿಕ ಸಂಕಷ್ಟದಲ್ಲಿದ್ದ ತಂಡಕ್ಕೆ 25 ಲಕ್ಷ ರೂಪಾಯಿ ಹಣ ಸಹಾಯ ಕೂಡ ನೀಡಿದ್ದಾರೆ ಸತೀಶ್. ಸಿನಿಮಾ ರಿಲೀಸ್ ಬಳಿಕ ಹಣ ಹಾಗೂ ಸಂಭಾವನೆ ಪಡೀತೀನಿ ಅಂದಿದ್ದರಂತೆ.

ಒಟ್ಟಾರೆ ಈಗ ಯಾರದು ತಪ್ಪು ಯಾರದು ಸರಿ ಅನ್ನೋದಕ್ಕಿಂತ ಹೆಚ್ಚಾಗಿ, ನಿರ್ದೇಶಕ ವಿನೋದ್ ತೆಗೆದುಕೊಂಡ ನಿರ್ಧಾರವೇ ಮಹಾ ತಪ್ಪಾಗಿದೆ. ಇಂತಹ ನಿರ್ಧಾರಗಳು ಬೇರಾವ ನಿರ್ಮಾಪಕರೂ ತೆಗೆದುಕೊಳ್ಳದಿದ್ದರೆ ಸಾಕು. ಇದ್ದು ಜಯಿಸಬೇಕು. ಸಾವೇ ಎಲ್ಲಕ್ಕೂ ಪರಿಹಾರವಲ್ಲ ಅನ್ನೋದು ಮಾತ್ರ ಸಾರ್ವಕಾಲಿಕ ಸತ್ಯ. ಅದನ್ನ ಎಲ್ಲರೂ ಅರಿತರೆ ಸಾಕು. ಅಲ್ಲದೆ ಮೃತ ವಿನೋದ್ ಪತ್ನಿ ಸಿನಿಮಾನ ಕಂಪ್ಲೀಟ್ ಮಾಡಿ, ಪತಿಯ ಕನಸನ್ನ ನನಸು ಮಾಡಿದ್ರೆ ಅವ್ರ ಆಶಯ ಈಡೇರಿದಂತಾಗಲಿದೆ.

ಲಕ್ಷ್ಮೀನಾರಾಯಣ್ ಬಿ.ಎಸ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES