Wednesday, January 22, 2025

ಕರ್ನಾಟಕದ ಸ್ಟಾರ್​​ ಕ್ರಿಕೆಟಿಗರು ರಾಜ್ಯ ಬಿಟ್ಟು ಹೋಗುತ್ತಿರುವುದೇಕೆ; ರೋಚಕ ಮಾಹಿತಿ

ಬಹುಶಃ ಕರ್ನಾಟಕ ತಂಡ ಇನ್ನು ಕನಿಷ್ಠ ಐದಾರು ವರ್ಷ ರಣಜಿ ಟ್ರೋಫಿ ಗೆಲ್ಲುವುದಿಲ್ಲ. ದೊಡ್ಡ ಟೂರ್ನಮೆಂಟ್ ಗೆಲ್ಲಿಸುವ ಆಟಗಾರರು ತಂಡದಲ್ಲಿದ್ದರೆ ತಾನೇ ರಣಜಿ ಟ್ರೋಫಿ ಗೆಲ್ಲುವ ಮಾತು ಎಂದು ಊಹಿಸಬಹುದು. ಸದ್ಯ 2013ಕ್ಕೂ ಮುನ್ನ ಕರ್ನಾಟಕ ತಂಡ 14 ವರ್ಷಗಳಿಂದ ರಣಜಿ ಟ್ರೋಫಿ ಗೆದ್ದಿರಲಿಲ್ಲ. ಆ ಕೊರಗು ನೀಗಿಸಿದ್ದು ದಾವಣಗೆರೆ ಎಕ್ಸ್​ಪ್ರೆಸ್ ಆರ್.ವಿನಯ್ ಕುಮಾರ್ ನಾಯಕತ್ವದ ಆ ಐತಿಹಾಸಿಕ ತಂಡ.
ವಿನಯ್​ ಕುಮಾರ್​ ನೇತೃತ್ವದ ಅನುಭವಿಗಳು ಮತ್ತು ಬಿಸಿರಕ್ತದ ಯುವಪಡೆಯ ಮಿಶ್ರಣದಿಂದ ಕೂಡಿದ್ದ ಅದ್ಭುತ ತಂಡವದು. ಆ ಕಾಲಕ್ಕೆ ಇಡೀ ಭಾರತ ಪೂರ್ಣ ಸಾಮರ್ಥ್ಯದೊಂದಿಗೆ ಬಂದು ಆಡಿದರೂ ಹೊಡೆದು ಹಾಕುವಷ್ಟರ ಮಟ್ಟಿಗಿನ ತಾಕತ್ತು ಕರ್ನಾಟಕ ತಂಡಕ್ಕಿತ್ತು.

ಆರ್.ವಿನಯ್ ಕುಮಾರ್, ರಾಬಿನ್ ಉತ್ತಪ್ಪ, ಮನೀಶ್ ಪಾಂಡೆ, ಅಭಿಮನ್ಯು ಮಿಥುನ್, ಎಸ್.ಅರವಿಂದ್, ಗಣೇಶ್ ಸತೀಶ್, ಅಮಿತ್ ವರ್ಮಾ, ಸಿ.ಎಂ ಗೌತಮ್​ರಂಥಹ ಅನುಭವಿಗಳ ಜೊತೆ ಕೆ.ಎಲ್ ರಾಹುಲ್, ಕರುಣ್ ನಾಯರ್, ಮಯಾಂಕ್ ಅಗರ್ವಾಲ್, ಶ್ರೇಯಸ್ ಗೋಪಾಲ್, ಆರ್.ಸಮರ್ಥ್, ಎಚ್.ಎಸ್ ಶರತ್​ರಂತಹ ಹೊಸ ಹುಡುಗರು ತಂಡದಲ್ಲಿದ್ದರು. ಎಲ್ಲರೂ ಮ್ಯಾಚ್ ವಿನ್ನರ್​ಗಲೇ.

2013-14 ಮತ್ತು 2014-15ರಲ್ಲಿ ಸತತ ಎರಡು ಬಾರಿ ರಣಜಿ ಟ್ರೋಫಿ ಗೆದ್ದ ಕರ್ನಾಟಕ ತಂಡದಲ್ಲಿದ್ದ ಆಟಗಾರರ ಪೈಕಿ ಈಗ ತಂಡದಲ್ಲಿ ಉಳಿದುಕೊಂಡಿರುವುದು ಎಷ್ಟು ಮಂದಿ ಗೊತ್ತಾ? ಕೇವಲ ಇಬ್ಬರು..ಒಬ್ಬ ಮನೀಶ್ ಪಾಂಡೆ, ಮತ್ತೊಬ್ಬ ಮಯಾಂಕ್ ಅಗರ್ವಾಲ್.

ಅಂದಿನ ಆ ಐತಿಹಾಸಿಕ ತಂಡದಲ್ಲಿದ್ದವರಲ್ಲಿ ಏಳು ಮಂದಿ ರಾಜ್ಯ ತಂಡವನ್ನು ತೊರೆದು ಬೇರೆ ರಾಜ್ಯಗಳಿಗೆ ವಲಸೆ ಹೋಗಿದ್ದರು. ಅದು ನಾಯಕ ಆರ್.ವಿನಯ್ ಕುಮಾರ್ ಅವರಿಂದ ಹಿಡಿದು ಕರುಣ್ ನಾಯರ್, ಶ್ರೇಯಸ್ ಗೋಪಾಲ್, ಆರ್.ಸಮರ್ಥ್​ ವರೆಗೆ.. ಮುಂದಿನ ಸರದಿ ಮನೀಶ್ ಪಾಂಡೆಯದ್ದಾದರೂ ಅಚ್ಚರಿ ಪಡುವಂಥದ್ದು ಏನೂ ಇಲ್ಲ.

ಕರ್ನಾಟಕ ತಂಡ 10 ವರ್ಷಗಳಿಂದ ರಣಜಿ ಟ್ರೋಫಿ ಗೆದ್ದಿಲ್ಲ ಎಂಬ ಕೊರಗಿನ ಮಧ್ಯೆ, ಟ್ರೋಫಿ ಗೆಲ್ಲಿಸುವ ಸಾಮರ್ಥ್ಯವಿದ್ದ ಆಟಗಾರರು ಒಬ್ಬೊಬ್ಬರಾಗಿಯೇ ರಾಜ್ಯ ತಂಡವನ್ನು ತೊರೆದು ಹೋಗಿದ್ದಾರೆ.., ಹೋಗುತ್ತಿದ್ದಾರೆ.. ಈಗಿರುವುದು ಕಂಪ್ಲೀಟ್ ಯಂಗ್​ ಬ್ಲೆಡ್​ (Young Blood).

ಯೆಸ್​(​!) ಹಳೆ ನೀರು ಕೊಚ್ಚಿ ಹೋದಂತೆ ಹೊಸ ನೀರು ಬರಲೇಬೇಕು. ಹಳಬರು ತೆರೆಮರೆಗೆ ಸರಿದಷ್ಟೂ ಹೊಸಬರಿಗೆ ಅವಕಾಶಗಳು ಸಿಗುತ್ತವೆ ಎಂಬುದೂ ಸತ್ಯ. ಹಾಗಂತ ತಂಡದ ಆಧಾರಸ್ಥಂಭಗಳೇ ಕುಸಿದರೆ. ಆ ತಂಡ ದೊಡ್ಡ ದೊಡ್ಡ ಟ್ರೋಫಿಗಳನ್ನು ಗೆಲ್ಲುವುದಾದರೂ ಹೇಗೆ(?)

ಕಳೆದ ವರ್ಷ ಕರುಣ್ ನಾಯರ್, ಶ್ರೇಯಸ್ ಗೋಪಾಲ್ ಮತ್ತು ಕೆ.ವಿ ಸಿದ್ಧಾರ್ಥ್ ಕರ್ನಾಟಕ ತಂಡವನ್ನು ತೊರೆದಿದ್ದರು. ಕರುಣ್ ವಿದರ್ಭ ಕಡೆ ಹೊರಟರೆ, ಶ್ರೇಯಸ್ ಗೋಪಾಲ್ ಕೇರಳಕ್ಕೆ, ಸಿದ್ಧಾರ್ಥ್ ಗೋವಾ ಕಡೆ ಮುಖ ಮಾಡಿದ್ದ. ಇವರಲ್ಲಿ ಕರುಣ್ ನಾಯರ್ ಮತ್ತು ಶ್ರೇಯಸ್ ಗೋಪಾಲ್ ಕರ್ನಾಟಕ ತಂಡ ಅವಳಿ ತ್ರಿವಳಿ ಕಿರೀಟಗಳ ಹಿಂದಿನ ರೂವಾರಿಗಳಾಗಿದ್ದವರು. 2014-15ರ ರಣಜಿ ಫೈನಲ್ ಪಂದ್ಯದಲ್ಲಿ ತಮಿಳುನಾಡು ವಿರುದ್ಧ ಕರುಣ್ ನಾಯರ್ ಬಾರಿಸಿದ್ದ ತ್ರಿಶತಕ, 2014ರ ಇರಾನಿ ಕಪ್ ಪಂದ್ಯದಲ್ಲಿ ರೆಸ್ಟ್ ಆಫ್ ಇಂಡಿಯಾ ವಿರುದ್ಧ ಶ್ರೇಯಸ್ ಗೋಪಾಲ್ ಮಾಡಿದ್ದ ಹ್ಯಾಟ್ರಿಕ್ ಸಾಧನೆ. ಇವೆಲ್ಲಾ ಈ ಆಟಗಾರರು ಕರ್ನಾಟಕ ತಂಡದ ಯಶಸ್ಸಿಗೆ ಎಷ್ಟರ ಮಟ್ಟಿಗೆ ಕಾರಣರಾಗಿದ್ದರು ಎಂಬುದಕ್ಕೆ ಸಣ್ಣ ಉದಾಹರಣೆಗಳಷ್ಟೇ.

ಕರುಣ್ ನಾಯರ್ ಏನೋ 2-3 ವರ್ಷಗಳಿಂದ ರನ್ ಹೊಡೆಯದೇ ತಂಡದಿಂದ ಹೊರ ಬಿದ್ದಿದ್ದರು.
ಆದರೆ ಶ್ರೇಯಸ್ ಗೋಪಾಲ್(?) ರೆಡ್ ಬಾಲ್ ಕ್ರಿಕೆಟ್​ನಲ್ಲಿ ಕರ್ನಾಟಕ ತಂಡದ ಮ್ಯಾಚ್ ವಿನ್ನರ್ ಆಗಿದ್ದವನು. ವಿನಯ್ ಕುಮಾರ್ ಕರ್ನಾಟಕ ತಂಡವನ್ನು ತೊರೆದ ನಂತರ ಕೆಳ ಕ್ರಮಾಂಕದಲ್ಲಿ ತಂಡದ ಬ್ಯಾಟಿಂಗ್ ಆಧಾರಸ್ಥಂಭವಾಗಿದ್ದವನು ಶ್ರೇಯಸ್ ಗೋಪಾಲ್. ಆತ ಒಂದು ರೀತಿಯಲ್ಲಿ Saviour Of Karnataka Ranji Team. ಅಂತಹ ಶ್ರೇಯಸ್ ಬೇರೆ ರಾಜ್ಯದ ಪರ ಆಡಲು (No Objection Certificate) NOCಗಾಗಿ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಮನವಿ ಸಲ್ಲಿಸಿದಾಗ ಒಂದು ಮಾತೂ ಆಡದೆ NOC ಕೊಟ್ಟು ಕಳುಹಿಸಲಾಗಿತ್ತು.

ಇನ್ನು ಕೆ.ವಿ ಸಿದ್ಧಾರ್ಥ್ 2021-22ರಲ್ಲಿ ಕರ್ನಾಟಕ ಪರ ರಣಜಿ ಟ್ರೋಫಿಯಲ್ಲಿ ಅತೀ ಹೆಚ್ಚು ರನ್ ಗಳಿಸಿದ್ದವ. ಮುಂದಿನ ವರ್ಷ ಆತನಿಗೆ ಅವಕಾಶಗಳೇ ಸಿಗಲಿಲ್ಲ. ಆತನಿಗೆ ಬೇರೆ ಆಯ್ಕೆಯಾದರೂ ಏನಿತ್ತು(?) ಈ ವರ್ಷ ಆರ್.ಸಮರ್ಥ್ ರಾಜ್ಯ ತಂಡ ತೊರೆದು ಉತ್ತರಾಖಂಡ ತಂಡ ಸೇರಿಕೊಂಡಿದ್ದಾರೆ.

ಹೀಗೆ ಕಳೆದ 10 ವರ್ಷಗಳಲ್ಲಿ ಕರ್ನಾಟಕ ತಂಡವನ್ನು ತೊರೆದಿರುವ ಪ್ರಮುಖ ಆಟಗಾರರ ಸಂಖ್ಯೆ 10. ವಿನಯ್ ಕುಮಾರ್, ರಾಬಿನ್ ಉತ್ತಪ್ಪ, ಗಣೇಶ್ ಸತೀಶ್, ಅಮಿತ್ ವರ್ಮಾ, ಸ್ಟುವರ್ಟ್ ಬಿನ್ನಿ, ಕರುಣ್ ನಾಯರ್, ಶ್ರೇಯಸ್ ಗೋಪಾಲ್, ಕೆ.ವಿ ಸಿದ್ಧಾರ್ಥ್, ರೋಹನ್ ಕದಂ, ಆರ್.ಸಮರ್ಥ್. ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ಇವರಲ್ಲಿ ವಿನಯ್ ಕುಮಾರ್ ಮತ್ತೊಂದಷ್ಟು ವರ್ಷ ಆಡುತ್ತೇನೆ ಎಂದಿದ್ದರೆ ಬೇಡ ಎನ್ನುವ ಧೈರ್ಯ ಯಾರಿಗೂ ಇರಲಿಲ್ಲ. ಹೊಸಬರಿಗೆ ಅವಕಾಶ ಮಾಡಿಕೊಡುವ ದೊಡ್ಡ ಮನಸ್ಸಿನೊಂದಿಗೆ ವಿನಯ್ ಪಾಂಡಿಚೇರಿಗೆ ಹೋಗಿ ಆಡಿದ್ದ. ಆದರೆ, ಉಳಿದವರ ಕಥೆ(?) ಅದರಲ್ಲೂ ಶ್ರೇಯಸ್ ಗೋಪಾಲ್ ಅನುಉಸ್ಥಿತಿ(exit)ಯಿಂದ ತಂಡಕ್ಕೆ ಆಗಿರುವ ನಷ್ಟ ಅಷ್ಟಿಷ್ಟಲ್ಲ. ಮತ್ತೊಬ್ಬ ಶ್ರೇಯಸ್ ಗೋಪಾಲ್ ಬರಲು ಇನ್ನೆಷ್ಟು ವರ್ಷ ಕಾಯಬೇಕೋ ಗೊತ್ತಿಲ್ಲ(!)

ರಾಜ್ಯ ತೊರೆಯುತ್ತಿರುವ ಕ್ರಿಕೆಟಿಗರನ್ನು convince ಮಾಡುವ ಕೆಲಸಕ್ಕೂ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮುಂದಾಗುತ್ತಿಲ್ಲ ಎಂಬ ಮಾಹಿತಿ ಇದೆ. ಹೋಗುವವರು ಹೋಗಲಿ ಎಂಬ ಮನಸ್ಥಿತಿಯಲ್ಲಿದ್ದಾರೆ.

– ಸುದ್ದಿಯ ಮೂಲ : ಸುದರ್ಶನ್ ಗೌಡ ಫೇಸ್​ಬುಕ್​ ಪೇಜ್​ನಿಂದ…

RELATED ARTICLES

Related Articles

TRENDING ARTICLES