Sunday, September 8, 2024

ವಿನಯ್ ಕುಮಾರ್ ಕರ್ನಾಟಕ ಕೋಚ್ ಆಗುವುದು ರಾಜ್ಯ ಕ್ರಿಕೆಟ್ ಸಂಸ್ಥೆಗೆ ಬೇಕಿಲ್ಲವೇ?

ವಿನಯ್​ ಕುಮಾರ್​ ಕರ್ನಾಟಕ ತಂಡದ ಕೋಚ್​ ಆಗುವುದು ರಾಜ್ಯ ಕ್ರಿಕೆಟ್​ ಸಂಸ್ಥೆಗೆ ಬೇಕಿಲ್ಲವೇ? ಎಂಬ ಪ್ರಶ್ನೆಯನ್ನು ಕೆಎಸ್​ಸಿಎ ಮುಂದಿರಿಸಿ, ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವಿನಯ್​ ಕುಮಾರ್ ಅವರ ಸಾಧನೆಗಳ ಬಗ್ಗೆ ಕ್ರೀಡಾ ವರದಿಗಾರ ಸುದರ್ಶನ್​ ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡುವ ಮೂಲಕ ಹಂಚಿಕೊಂಡಿದ್ದಾರೆ.

“10 ವರ್ಷಗಳ ಹಿಂದೆ ಕರ್ನಾಟಕ ತಂಡವನ್ನು ರಣಜಿ ಚಾಂಪಿಯನ್ ಪಟ್ಟದತ್ತ ಮುನ್ನಡೆಸಿದವನು ನಮ್ಮೆಲ್ಲರ ಹೆಮ್ಮೆಯ ದಾವಣಗೆರೆ ಎಕ್ಸ್’ಪ್ರೆಸ್ ಆರ್.ವಿನಯ್ ಕುಮಾರ್.

ನಾನು ಆತನನ್ನು “ದೇಶೀಯ ಕ್ರಿಕೆಟ್’ನ ಕಿಂಗ್” ಎನ್ನುತ್ತೇನೆ. ಅಂಥಾ ಒಬ್ಬ ನಾಯಕನನ್ನು, ಅಂಥಾ ಒಬ್ಬ ಕ್ರಿಕೆಟಿಗನನ್ನು ಭಾರತದ ದೇಶೀಯ ಕ್ರಿಕೆಟ್ ತನ್ನ ಇತಿಹಾಸದಲ್ಲೇ ಕಂಡಿಲ್ಲ. ಸತತ ಎರಡು ವರ್ಷ ಎರಡು ರಣಜಿ ಟ್ರೋಫಿ, ಎರಡು ಇರಾನಿ ಕಪ್, ಎರಡು ವಿಜಯ್ ಹಜಾರೆ ಟ್ರೋಫಿಗಳನ್ನು ಗೆದ್ದ ಮತ್ತೊಂದು ತಂಡ, ಮತ್ತೊಬ್ಬ ನಾಯಕನನ್ನು ತೋರಿಸಿ.. ಸಾಧ್ಯವೇ ಇಲ್ಲ. ಕಾರಣ, ಈ ಸಾಧನೆ ಮಾಡಿರುವುದು ಕರ್ನಾಟಕ ತಂಡ ಮಾತ್ರ..
ಕರ್ನಾಟಕ ತಂಡಕ್ಕೆ ಅಂಥಾ ಒಂದು ಕಿರೀಟ ತೊಡಿಸಿರುವುದು ವಿನಯ್ ಕುಮಾರ್ ಮಾತ್ರ. 2013-14ನೇ ಸಾಲಿನಲ್ಲಿ ಕರ್ನಾಟಕದ ರಣಜಿ ವಿಕ್ರಮವನ್ನು ವಿವರಿಸುವಾಗ ಆ ಸೆಮಿಫೈನಲ್ ಪಂದ್ಯದ ಬಗ್ಗೆ ಒಂದೆರಡು ಸಾಲುಗಳನ್ನು ಬರೆಯದಿದ್ದರೆ ಮಹಾಪರಾಧವಾಗಿ ಬಿಡುತ್ತದೆ.

ಇದನ್ನೂ ಓದಿ: ಅಮೇರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಮೇಲೆ ಗುಂಡಿನ ದಾಳಿ!

ನನಗಿನ್ನೂ ನೆನಪಿದೆ.. ಮೊಹಾಲಿಯಲ್ಲಿ ಪಂಜಾಬ್ ವಿರುದ್ಧ ಸೆಮಿಫೈನಲ್. ಮೊದಲ ದಿನದಾಟವನ್ನು ಪೂರ್ತಿಯಾಗಿ ವರುಣದೇವ ಆಪೋಶನ ತೆಗೆದುಕೊಂಡಿದ್ದ. 2ನೇ ದಿನ ಆಟ ಆರಂಭಗೊಂಡ ಕ್ಷಣದಿಂದ ಪಂಜಾಬ್ ತಂಡ ರನ್ ಹೊಳೆಯನ್ನೇ ಹರಿಸಿ ಬಿಟ್ಟಿತು. 223 ರನ್ನಿಗೆ 4 ವಿಕೆಟ್.. ದೊಡ್ಡ ಮೊತ್ತದತ್ತ ಸ್ಪಷ್ಟವಾಗಿ ದಾಪುಗಾಲು ಹಾಕುತ್ತಿತ್ತು ಪಂಜಾಬ್. ಆದರೆ ನಮ್ಮ ವಿನಯ್ ಕುಮಾರ್ ಎಂಥಾ ನಾಯಕನೆಂದರೆ.. ಸಾವಿರ ಪಡೆಗಳು ಸಮರ ಸಾರಿದರೂ ಎದೆಯೊಡ್ಡಿ ನಿಲ್ಲುವ ಛಲದಂಕಮಲ್ಲ..

ಆ ದಿನ ವಿನಯ್ ಮಾಡಿದ ಅದೊಂದು ಸ್ಪೆಲ್ ಕರ್ನಾಟಕ ತಂಡದ ಕಥೆಯನ್ನೇ ಬದಲಿಸಿ ಬಿಟ್ಟಿತು. ವಿನಯ್
ಅದೆಷ್ಟು ಮಾರಕವಾಗಿ ಪಂಜಾಬ್ ಮೇಲೆ ಎರಗಿದನೆಂದರೆ.. 225ಕ್ಕೆ 4 ವಿಕೆಟ್ ಕಳೆದುಕೊಂಡು ಸುಸ್ಥಿತಿಯಲ್ಲಿದ್ದ ಪಂಜಾಬ್ 270 ರನ್ನಿಗೆ ನೆಗೆದು ಬಿದ್ದಿತ್ತು. ಬೌಲರ್’ಗಳ ಪಾಲಿಗೆ ನರಕವಾಗಿದ್ದ ಡೆಡ್ ಪಿಚ್’ನಲ್ಲಿ ವಿನಯ್ ಒಂದೇ ಉಸಿರಲ್ಲಿ 5 ವಿಕೆಟ್ ಉಡಾಯಿಸಿ ಬಿಟ್ಟಿದ್ದ. ನಂತರ ಕರುಣ್ ನಾಯರ್ ಮತ್ತು ಅಮಿತ್ ವರ್ಮಾ ಬಾರಿಸಿದ ಶತಕಗಳು ಕರ್ನಾಟಕವನ್ನು ಫೈನಲ್’ಗೆ ಮುನ್ನಡೆಸಿದ್ದವು. ಅಲ್ಲಿಂದ ಮುಂದೆ ನಡೆದದ್ದು ದೇಶೀಯ ಕ್ರಿಕೆಟ್ ಹಿಂದೆದ್ದೂ ಕಾಣದ, ಮುಂದೆಂದೂ ಕಾಣಲು ಅಸಾಧ್ಯ ಎನಿಸುವಂಥಾ ಕರ್ನಾಟಕ ತಂಡದ “ಅವಳಿ ತ್ರಿವಳಿ” ಮಹಾ ಸಾಧನೆ.

ವಿನಯ್ ಕುಮಾರ್ ಕರ್ನಾಟಕಕ್ಕೆ ರಣಜಿ ಟ್ರೋಫಿ ಗೆದ್ದು ಕೊಟ್ಟದ್ದೇ ಕೊನೆ.. ನಂತರ ನಮ್ಮ ತಂಡ ಮತ್ತೆ ರಣಜಿ ಟ್ರೋಫಿ ಗೆದ್ದಿಲ್ಲ. ಗೆಲ್ಲಿಸುವ ಸಾಮರ್ಥ್ಯವುಳ್ಳ ವಿನಯ್’ನನ್ನು ಕರ್ನಾಟಕ ತಂಡದ ಹೆಡ್ ಕೋಚ್ ಆಗಿ ನೇಮಕ ಮಾಡುವ ಅವಕಾಶವಿದ್ದರೂ ನಮ್ಮ ಕ್ರಿಕೆಟ್ ಸಂಸ್ಥೆ ಅದೇಕೋ ಮನಸ್ಸು ಮಾಡುತ್ತಿಲ್ಲ. ಈ ಬಾರಿ ಮತ್ತೆ ಯರೇ ಗೌಡ ರಾಜ್ಯ ತಂಡದ ಹೆಡ್ ಕೋಚ್ ಆಗಿ ಬಂದಿದ್ದಾರೆ.

ಯರೇ ಗೌಡ 2020ರಲ್ಲಿ ಕರ್ನಾಟಕ ತಂಡದ ಕೋಚ್ ಆಗಿದ್ದವರು. ಈ ಬಾರಿ ಇತಿಹಾಸದಲ್ಲೇ ಮೊದಲ ಬಾರಿ ಕರ್ನಾಟಕಕ್ಕೆ ಸಿ.ಕೆ ನಾಯ್ಡು ಟ್ರೋಫಿ U-23 ಚಾಂಪಿಯನ್’ಷಿಪ್ ಗೆಲ್ಲಿಸಿದ್ದ ಯರೇ ಗೌಡರಿಗೆ ಸೀನಿಯರ್ ತಂಡದ ಕೋಚ್ ಆಗಿ ಪ್ರಮೋಶನ್ ಸಿಕ್ಕಿದೆ. ಯರೇ ಗೌಡ ಒಳ್ಳೆಯ ಆಟಗಾರನಷ್ಟೇ ಅಲ್ಲ, ಒಳ್ಳೆಯ ಕೋಚ್ ಕೂಡ ಹೌದು. ಆದರೆ ಕರ್ನಾಟಕ ಸೀನಿಯರ್ ತಂಡದ ಮಟ್ಟಿಗೆ ಹೇಳುವುದಾದರೆ ಈಗಾಗಲೇ tried and tested ಕೋಚ್. ಅವರಿದ್ದಾಗಲೂ ರಣಜಿ ಟ್ರೋಫಿ ಬಂದಿಲ್ಲ. ಈ ವರ್ಷ ಗೆದ್ದೇ ಗೆಲ್ಲುತ್ತಾರೆ ಎಂದು ಎದೆ ತಟ್ಟಿ ಹೇಳುವಷ್ಟು ಬಲ ನಮ್ಮ ರಣಜಿ ತಂಡದಲ್ಲಿ ಉಳಿದಿಲ್ಲ. ಕಾರಣ, ಶ್ರೇಯಸ್ ಗೋಪಾಲ್, ಸಮರ್ಥ್, ಸಿದ್ಧಾರ್ಥ್, ಕರುಣ್ ನಾಯರ್ ಸಹಿತ ಒಂದಷ್ಟು ಪ್ರತಿಭಾವಂತರು ಬೇರೆ ರಾಜ್ಯಗಳಿಗೆ ವಲಸೆ ಹೋಗಿದ್ದಾರೆ. ಈಗ ಸೀನಿಯರ್ ಆಟಗಾರರೆಂದರೆ ಮಯಾಂಕ್ ಅಗರ್ವಾಲ್ ಮತ್ತು ಮನೀಶ್ ಪಾಂಡೆ ಮಾತ್ರ. ಇವರಲ್ಲಿ ಪಾಂಡೆ ಕೂಡ ಒಂದು ಕಾಲು ಹೊರಗಿಟ್ಟಿರುವ ಸುದ್ದಿಯಿದೆ.

ಇದನ್ನೂ ಓದಿ: ಭಾರತದ ಬೌಲಿಂಗ್ ಕೋಚ್ ಸ್ಥಾನಕ್ಕೆ ಕನ್ನಡಿಗ ವಿನಯ್ ಕುಮಾರ್ ಹೆಸರು ಸೂಚಿಸಿದ ಗಂಭೀರ್!

ಹೀಗಾಗಿ ಹೊಸ ಹುಡುಗರಿಂದಲೇ ತುಂಬಿ ತುಳುಕುತ್ತಿರುವ ಕರ್ನಾಟಕ ತಂಡವನ್ನು ಪಳಗಿಸಲು ವಿನಯ್ ಕುಮಾರ್’ಗಿಂತ ಒಳ್ಳೆಯ ಗರಡಿ ಮನೆಯ ಪೈಲ್ವಾನ್ ಬೇರೆ ಯಾರಿದ್ದರು..? ಈಗೇನೋ ಯರೇ ಗೌಡ ಬಂದಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಕರ್ನಾಟಕ ಮತ್ತೆ ರಣಜಿ ಟ್ರೋಫಿ ಗೆಲ್ಲಲಿ ಎಂದು ಆಶಿಸೋಣ..
ಒಂದು ವೇಳೆ… ಇನ್ನೆರಡು ವರ್ಷಗಳಲ್ಲಿ ಕರ್ನಾಟಕ ರಣಜಿ ಟ್ರೋಫಿ ಗೆಲ್ಲದೇ ಇದ್ದರೆ..? ಆಗಲೂ ವಿನಯ್ ಕುಮಾರ್ ನಮಗೆ ಬೇಡ ಎಂದು ಬಿಡುತ್ತೀರಾ..? ಹಾಗೆ ಮಾಡಿದರೆ ನಷ್ಟ ಕರ್ನಾಟಕ ಕ್ರಿಕೆಟ್’ಗೆ ಹೊರತು ವಿನಯ್ ಕುಮಾರ್’ಗಲ್ಲ.. ಚಾಂಪಿಯನ್ ಕ್ರಿಕೆಟರ್ ವಿನಯ್’ಗೆ ಡಿಮ್ಯಾಂಡ್ ಇದ್ದೇ ಇದೆ. ಅದಿಲ್ಲದಿದ್ದರೆ ಭಾರತ ತಂಡದ ಬೌಲಿಂಗ್ ಕೋಚ್ ಸ್ಥಾನಕ್ಕೆ ಎಲ್ಲರಿಗಿಂತ ಮೊದಲಿಗನಾಗಿ ವಿನಯ್ ಹೆಸರನ್ನು ಗೌತಮ್ ಗಂಭೀರ್ ಬಿಸಿಸಿಐ ಮುಂದಿಡುತ್ತಿರಲಿಲ್ಲ..!

RELATED ARTICLES

Related Articles

TRENDING ARTICLES