Sunday, September 8, 2024

ರಾಮನಗರ ಜಿಲ್ಲೆಯ ಹೆಸರು ಬದಲಿಸಬೇಡಿ: ಸಿಎಂಗೆ ಪತ್ರ ಬರೆದ ಸಂಸದ ಡಾ.ಮಂಜುನಾಥ್​

ರಾಮನಗರ: ಜಿಲ್ಲೆಯ ಮರುನಾಮಕರಣ ಮಾಡುವುದು ಬೇಡ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಾ.ಸಿ.ಎನ್​ ಮಂಜುನಾಥ್​ ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.

ಈಗಾಗಲೇ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ರಾಮನಗರ ಜಿಲ್ಲಾ ಕಾಂಗ್ರೆಸ್​ ಶಾಸಕರು ಮತ್ತು ಮುಖಂಡರು ಸೇರಿ ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುಮಾನಕರಣ ಮಾಡುವಂತೆ ಮನವಿ ಪತ್ರವನ್ನು ಸಲ್ಲಿಸಿದ್ದರು. ಈ ಮನವಿಯನ್ನು ಪುರಸ್ಕರಿಸದೆ ರಾಮನಗರ ಜಿಲ್ಲೆಯ ಹೆಸರನ್ನು ಯಥಾವತ್ತಾಗಿ ಮುಂದುವರೆಸುವಂತೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಾ.ಮಂಜುನಾಥ್​ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.

ಮುಖ್ಯಮಂತ್ರಿಗಳಿಗೆ ಸಂಸದ ಮಂಜುನಾಥ್​ ಬರೆದಿರುವ ಪತ್ರದಲ್ಲಿ, ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಯೆ ಸಮಂಜಸವಾಗಿರುವುದಿಲ್ಲ. ರಾಮನಗರಕ್ಕೆ ಭಾವನಾತ್ಮಕ, ಧಾರ್ಮಿಕ, ಐತಿಹಾಸಿಕ ಹಾಗೂ ಪೌರಾಣಿಕ ಇತಿಹಾಸವಿದೆ. ಕ್ಲೋಸ್‌ಪೇಟೆಗೆ ರಾಮನಗರವೆಂದು ಮರುನಾಮಕರಣ ಮಾಡಿದವರು ರಾಜ್ಯದ ಹೆಸರಾಂತ ಮಾಜಿ ಮುಖ್ಯ ಮಂತ್ರಿಯವರಾದ ದಿವಂಗತ ಕೆಂಗಲ್ ಹನುಮಂತಯ್ಯನವರು.

ಇದನ್ನೂ ಓದಿ: ಯಶ್ ಹೊಸ ಲುಕ್ ನೋಡಿ ಫ್ಯಾನ್ಸ್ ಫುಲ್ ಫಿದಾ

ಧಾರ್ಮಿಕ ಗುರುಗಳಾದ ಆದಿ ಚುಂಚನಗಿರಿಯ ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮಿಜೀಯವರು ಹಾಗೂ ನಡೆದಾಡುವ ದೇವರೆಂದೇ ಪ್ರಸಿದ್ದಿಯಾದ ಸಿದ್ದಗಂಗಾ ಮಠದ ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಜೀಯವರು ರಾಮನಗರ ಜಿಲ್ಲೆಯವರು. ಬೆಂಗಳೂರು ನಿರ್ಮಾತೃಗಳಾದ ನಾಡಪ್ರಭು ಕೆಂಪೆಗೌಡರು ಸಹ ಈ ಜಿಲ್ಲೆಗೆ ಸೇರಿದವರು. ರಾಮನಗರ ಜಿಲ್ಲೆಯು ರಾಜ್ಯಕ್ಕೆ ಐದು ಬಾರಿ ಮುಖ್ಯಮಂತ್ರಿ ಪದವಿಯನ್ನು ನೀಡಿದೆಯಲ್ಲದೆ ರಾಮನಗರದಿಂದ ಗೆದ್ದು ಮುಖ್ಯಮಂತ್ರಿಯವರಾಗಿದ್ದ ಸನ್ಮಾನ್ಯ ಹೆಚ್.ಡಿ. ದೇವೇಗೌಡರವರು ಈ ದೇಶದ ಪ್ರಧಾನಿಯಾಗಿದ್ದರು. ರಾಮನಗರ ಕಣ್ವ ಮಹರ್ಷಿಯ ನಾಡು. ರಾಮಾಯಣದಲ್ಲಿನ ಶ್ರೀ ರಾಮಚಂದ್ರರು ರಾಮಗಿರಿಯಲ್ಲಿ ತಂಗಿರುವ ಇತಿಹಾಸವಿದೆ. ಈಗಾಗಲೇ ರಾಮನಗರವು ರೇಷ್ಮೆ ನಾಡೆಂದೇ ಪ್ರಸಿದ್ದಿಯಾಗಿದೆ.

ಇದರ ಜೊತೆಗೆ ರಾಮನಗರದ ಹೆಸರು ಹೇಳುತ್ತಿದಂತೆ ಜಾನಪದ ಲೋಕ, ಚನ್ನಪಟ್ಟಣದ ಗೊಂಬೆಗಳು, ಅರ್ಕಾವತಿ, ಕಾವೇರಿ, ಶಿಂಷಾ, ಕಣ್ವ ನದಿಗಳು; ಮಂಚನಬೆಲೆ, ಬೈರಮಂಗಲ, ಹಾರೋಬೆಲೆ, ಕಣ್ಣ ಮತ್ತು ಇಗ್ಗಲೂರು ಜಲಾಶಯಗಳು; ರಾಮಗಿರಿ, ಕೃಷ್ಣಗಿರಿ, ರೇವಣ್ಣಸಿದ್ದೇಶ್ವರ ಬೆಟ್ಟ, ಯತಿರಾಜಗಿರಿ, ಸೋಮಗಿರಿ, ಸಿಡಿಲಕಲ್ಲು ಮತ್ತು ಜಲಸಿದ್ದೇಶ್ವರ ಬೆಟ್ಟ, ಕಬ್ಬಾಳುದುರ್ಗ, ಸಾವನದುರ್ಗ, ಮೇಕೆದಾಟು ಮುಂತಾದವುಗಳು ನೆನಪಿಗೆ ಬರುತ್ತವೆ. ಈ ಹಿನ್ನೆಲೆಯಲ್ಲಿ ಈ ಜಿಲ್ಲೆಗೆ ರಾಮನಗರ ಎಂಬ ಹೆಸರೇ ರಕ್ಷಾಕವಚದಂತಿದೆ. ಎಂದು ವಿವರಣೆ ನೀಡುತ್ತಾ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.

RELATED ARTICLES

Related Articles

TRENDING ARTICLES